
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಖಂಡಿಸಿದ್ದಾರೆ.
ನಮ್ಮ ಹಿರಿಯ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಖಂಡನಾರ್ಹ ಮಾತ್ರವಲ್ಲ, ತೀರಾ ಕೀಳು ಮಟ್ಟದ್ದಾಗಿದೆ. ಒಬ್ಬ ಮಾಜಿ ಶಾಸಕರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮಗನಾಗಿ ಕನಿಷ್ಠ ಘನತೆಯನ್ನೂ ಕೂಡ ಅವರು ಮರೆತಂತಿದೆ ಎಂದು ತಿಳಿಸಿದ್ದಾರೆ.
ಮೈಸೂರು ಹಾಗೂ ಕರ್ನಾಟಕದ ಇನ್ನಿತರ ಭಾಗಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಚ್ಚಳವಾಗಿದ್ದು, ಹತಾಶೆಯಿಂದ ಯತೀಂದ್ರ ಅವಹೇಳನಕಾರಿ ಪದ ಪ್ರಯೋಗಕ್ಕೆ ಮುಂದಾಗಿದ್ದಾರೆ. ದೇಶದ ಗೃಹ ಸಚಿವರ ಕುರಿತಾದ ಅವರ ಕೀಳು ಮಟ್ಟದ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಅವರು ಕೂಡಲೇ ಕ್ಷಮೆ ಕೇಳಬೇಕು. ಇನ್ನು ಮುಂದಾದರೂ ಸಾರ್ವಜನಿಕ ಜೀವನದಲ್ಲಿ ಸಭ್ಯತೆಯಿಂದ ವರ್ತಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.