ಬೆಂಗಳೂರು: ನನ್ನ ಸಂಪೂರ್ಣ ಬದುಕನ್ನು ಬಿಜೆಪಿ ಸಂಘಟನೆಗೆ ಮೀಸಲಿಟ್ಟಿದ್ದೇನೆ. ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದೇವೆ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಮೀಸಲಾತಿ ಹೆಚ್ಚಿಸಿ ಅನೇಕ ದಶಕಗಳ ಬೇಡಿಕೆ ಈಡೇರಿಸಿದ್ದೇವೆ. ಬಿಜೆಪಿ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯಕ್ಕೆ ಪಕ್ಷ ಸ್ಥಾನಮಾನ ನೀಡಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಮತ್ತೆ ನಿಮಗೆ ಅಧಿಕಾರ ಕೊಡಲ್ಲ ಎಂದು ಶೆಟ್ಟರ್ ಅವರಿಗೆ ಹೇಳಿಲ್ಲ. ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ವರಿಷ್ಠರು ಭರವಸೆ ನೀಡಿದ್ದರು. ಕೇಂದ್ರಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಧರ್ಮೇಂದ್ರ ಪ್ರಧಾನ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಇನ್ನು ಹೆಚ್ಚಾಗಿ ಮಾತನಾಡಲ್ಲ ಎಂದರು.
ಜಗದೀಶ್ ಶೆಟ್ಟರ್ ಅವರಿಗೆ ಶಾಸಕ ಸ್ಥಾನ, ಪಕ್ಷದ ಅಧ್ಯಕ್ಷ, ವಿಪಕ್ಷನಾಯಕ, ಮಂತ್ರಿ, ಮುಖ್ಯಮಂತ್ರಿ ಸ್ಥಾನ ಬಿಜೆಪಿ ಕೊಟ್ಟಿದೆ. ಎಲ್ಲಾ ಸ್ಥಾನ ಮಾನ ನೀಡಿದ್ದರೂ, ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇದನ್ನು ಯಾರೂ ಕ್ಷಮಿಸಲ್ಲ. ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳವನ್ನು ಬಯಲು ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದು ನಂಬಿಕೆ ದ್ರೋಹ, ವಿಶ್ವಾಸದ್ರೋಹ ಎಂದು ಲಕ್ಷ್ಮಣ ಸವದಿ ಪಕ್ಷ ತೊರೆದ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮಣ ಸವದಿಗೆ ಪಕ್ಷ ಎಲ್ಲ ಅವಕಾಶಗಳನ್ನು ನೀಡಿದೆ. ಚುನಾವಣೆಯಲ್ಲಿ ಸೋತಿದ್ದವರಿಗೆ ಪರಿಷತ್ ಸದಸ್ಯ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ನೀಡಿದೆ. ಈಗ ಮತ್ತೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರ ಅವಧಿ ಆರು ವರ್ಷವಿದ್ದು, ಹತ್ತು ತಿಂಗಳಷ್ಟೇ ಮುಗಿದಿದೆ. ಇನ್ನು ಐದು ವರ್ಷ ಎರಡು ತಿಂಗಳ ಅವಕಾಶವಿದ್ದರೂ ಅವರು ಪಕ್ಷ ತೊರೆದಿದ್ದಾರೆ ಎಂದರು.
ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತಿಸುತ್ತೇವೆ. ನಾನೇ ಮುಂದೆ ನಿಂತು ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಸ್ವಾಗತಿಸುತ್ತೇನೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.