2021ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 4 ರಂದು ಸಂಭವಿಸಿದೆ. 2022 ರಲ್ಲಿ ಕೂಡ ಈ ವರ್ಷದಂತೆಯೇ 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣಗಳು ಸೇರಿವೆ. ಇವುಗಳಲ್ಲಿ ಕೆಲವು ಮಾತ್ರ ಭಾರತದಲ್ಲಿ ಗೋಚರಿಸುತ್ತವೆ. ಮುಂದಿನ ವರ್ಷದ ಸೂರ್ಯಗ್ರಹಣ ಯಾವ ರಾಶಿಯ ಮೇಲೆ ಎಷ್ಟು ಪ್ರಭಾವ ಬೀರಲಿದೆ ಎಂದು ತಿಳಿಯೋಣ.
2022ರ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಉಂಟಾಗಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದು ವೃಷಭ ರಾಶಿಯ ಮೇಲೆ ಬರಲಿದೆ. ಈ ಗ್ರಹಣ ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮತ್ತು ಅಂಟಾರ್ಕ್ಟಿಕ್ ಸಾಗರಗಳಲ್ಲಿ ಗೋಚರಿಸುತ್ತದೆ.
ಸೂರ್ಯಗ್ರಹಣವಾದ 15 ದಿನಕ್ಕೆ ಅಂದರೆ ಮೇ 15 ಕ್ಕೆ 2022ರ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು ವೃಶ್ಚಿಕ ರಾಶಿಯ ಮೇಲೆ ಬರಲಿದೆ. ಇದು ಭಾರತದಲ್ಲಿ ಮತ್ತು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕ ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅಂಟಾರ್ಕ್ಟಿಕ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳಲ್ಲಿ ಗೋಚರಿಸಲಿದೆ.
ಅಕ್ಟೋಬರ್ 25 ರಂದು 2022 ರ ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಮತ್ತೆ ವೃಶ್ಚಿಕ ರಾಶಿಯ ಮೇಲೆಯೇ ಬರಲಿದೆ. ಇದು ಭಾರತದಲ್ಲಿ ಕಾಣಿಸುವುದಿಲ್ಲ. ಯುರೋಪ್, ನೈಋತ್ಯ ಏಷ್ಯಾ, ಈಶಾನ್ಯ ಆಫ್ರಿಕಾ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಕಂಡುಬರುತ್ತದೆ.
2022 ರ ಕೊನೆಯ ಮತ್ತು ಎರಡನೇ ಚಂದ್ರಗ್ರಹಣ ನವೆಂಬರ್ 7-8 ರಂದು ಸಂಭವಿಸಲಿದೆ. ಇದು ಪೂರ್ಣ ಚಂದ್ರಗ್ರಹಣವಾಗಿದೆ. ವೃಷಭ ರಾಶಿಯ ಮೇಲೆ ಬರಲಿದೆ. ಈ ಗ್ರಹಣವನ್ನು ಭಾರತದ ಕೆಲವು ಭಾಗದಲ್ಲಿ ನೋಡಬಹುದು. ಈಶಾನ್ಯ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕದ ಹೆಚ್ಚಿನ ಭಾಗಗಳು, ಪೆಸಿಫಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಮತ್ತು ಅಟ್ಲಾಂಟಿಕ್, ಆರ್ಕ್ಟಿಕ್ ಮಹಾಸಾಗರಗಳಲ್ಲಿ ಗೋಚರಿಸಲಿದೆ.