ಕಲಬುರಗಿ: ಇತ್ತೀಚೆಗಷ್ಟೇ ಬಿಜೆಪಿಯಿಂದ ಉಚ್ಚಾಟನೆಗೊಳಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದವರಿಂದ ದೂರ ಉಳಿದಿದ್ದು, ತಮ್ಮ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದಾರೆ.
ಬುಧವಾರ ತಡರಾತ್ರಿ ಚಿಂಚೋಳಿಗೆ ಆಗಮಿಸಿದ ಅವರು, ತಮ್ಮ ಸಿದ್ದಸಿರಿ ಎಥೆನಾಲ್ ಪವರ್ ಘಟಕದ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಗುರುವಾರ ಇಡೀ ದಿನ ಮಾಧ್ಯಮ ಪ್ರತಿನಿಧಿಗಳು ಅತಿಥಿ ಗೃಹದ ಮುಂಭಾಗ ಕಾದು ಕುಳಿತರೂ ಯತ್ನಾಳ್ ಯಾರನ್ನೂ ಭೇಟಿಯಾಗಲಿಲ್ಲ.
ಹೈದರಾಬಾದ್‌ನಿಂದ ಆಗಮನ: ದೆಹಲಿಯಿಂದ ವಿಮಾನದಲ್ಲಿ ಬಂದಿಳಿದ ಯತ್ನಾಳ್ ಹೈದರಾಬಾದ್‌ನಿಂದ ಕಾರಿನಲ್ಲಿ ಚಿಂಚೋಳಿಗೆ ಬಂದಿದ್ದು, ಅತಿಥಿ ಗೃಹದಲ್ಲಿ ತಂಗಿದ್ದಾರೆ. ಅವರೊಂದಿಗೆ ಪುತ್ರ ರಾಮನಗೌಡ ಪಾಟೀಲ್ ಮತ್ತು ಕಾರ್ಖಾನೆಯ ನಿರ್ದೇಶಕರು ಇದ್ದರು.
ಭದ್ರತಾ ಸಿಬ್ಬಂದಿಯಿಂದ ತಡೆ: ಯತ್ನಾಳ್ ಅವರನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಅತಿಥಿ ಗೃಹದ ಆವರಣ ಪ್ರವೇಶಿಸಲು ಪ್ರಯತ್ನಿಸಿದಾಗ, ಭದ್ರತಾ ಸಿಬ್ಬಂದಿ ಅವರನ್ನು ತಡೆದು ಹೊರಗೆ ಕಳುಹಿಸಿದ್ದಾರೆ.
ಯತ್ನಾಳ್ ಮೌನಕ್ಕೆ ಕಾರಣವೇನು ? ಯತ್ನಾಳ್ ಅವರು ಮಾಧ್ಯಮದವರಿಂದ ದೂರ ಉಳಿದಿರುವುದು ಮತ್ತು ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಮೌನಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಯತ್ನಾಳ್ ಅವರು ಮುಂದಿನ ದಿನಗಳಲ್ಲಿ ಏನು ಹೇಳಿಕೆ ನೀಡುತ್ತಾರೆ ಮತ್ತು ಅವರ ಮುಂದಿನ ನಡೆಯೇನು ಎಂಬುದು ಕುತೂಹಲ ಕೆರಳಿಸಿದೆ.