ದಾವಣಗೆರೆ: ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿಯಾಗಲು ಕೆಲವರು ಸಾವಿರ ಕೋಟಿ ಇಟ್ಟುಕೊಂಡು ಕಾಯುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ನವರೂ ಇದ್ದಾರೆ. ಬೇರೆ ಪಕ್ಷದವರೂ ಇದ್ದಾರೆ ಎಂದು ಹೇಳಿದ್ದಾರೆ.
ಕೆಲವರು ಸಿಎಂ ಆಗಲು ಕಾಯುತ್ತಿದ್ದಾರೆ. ಭ್ರಷ್ಟಾಚಾರ ನಡೆಸಿ ಸಾಕಷ್ಟು ದುಡ್ಡು ಮಾಡಿದ್ದಾರೆ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ವಿರುದ್ಧ ಆರೋಪ ಮಾಡಿದರು.
ಈ ಹಿಂದೆ ಕೆಲವರ ಬಳಿ ಹಣದ ಕೌಂಟಿಂಗ್ ಮಷಿನ್ ಸಿಕ್ಕಿವೆ. ವಿಜಯೇಂದ್ರ ಅವರು ನಮ್ಮ ತಂದೆಯಿಂದ ಸಂಸ್ಕಾರ ಸಿಕ್ಕಿದೆ ಎಂದಿದ್ದರು. ಅವರಿಗೆ ಚಿತ್ರದುರ್ಗದ ಮನೆಯೊಂದರಲ್ಲಿ ಸಂಸ್ಕಾರ ಸಿಕ್ಕಿದೆ ಎಂದು ವ್ಯಂಗ್ಯವಾಡಿದ್ದಾರೆ
ಇನ್ನು ನಾವೀಗ ಆಪರೇಷನ್ ಕಮಲ ಮಾಡುವ ಪ್ರಯತ್ನ ಮಾಡಲ್ಲ. ಮುಂದಿನ ದಿನಗಳಲ್ಲಿ ನಮಗೆ ಸಂಪೂರ್ಣ ಬಹುಮತ ಸಿಗಲಿದೆ ಎಂದರು.
ಬಿಜೆಪಿಯಲ್ಲಿ ಭಿನ್ನಮತವಿದೆ. ಪಕ್ಷದಲ್ಲಿನ ಗೊಂದಲಗಳ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ರವಾನಿಸಲಾಗಿದೆ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚಿಸಿದೆ. ಹಾಗಾಗಿ ನಾವು ಹೆಚ್ಚು ಮಾತನಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸುವ ಅಧಿಕಾರ ನಮಗಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ. ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡೋಣ ಎಂದು ಹೇಳಿದರು.