ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಪಟ್ಟು ಹಿಡಿದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾವು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಖಚಿತ, ಗೆಲ್ಲುವುದೂ ನಿಶ್ಚಿತ ಎಂದು ಹೇಳಿದರು. ಕೋರ್ ಕಮಿಟಿಯಲ್ಲಿ ಒಪ್ಪಿದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದರು.
ಇದೇ ವೇಳೆ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್, ರಾತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ, ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಮನೆಗೆ, ಮಧ್ಯಾಹ್ನ 11ಕ್ಕೆ ಬೋಲೋ ಭಾರತ್ ಮಾತಾ ಕೀ ಜೈ…ಎಂದು ವ್ಯಂಗ್ಯವಾಡಿದರು.
ಇನ್ನು ಜನಾರ್ಧನ ರೆಡ್ಡಿ-ಶ್ರೀರಾಮು ನಡುವಿನ ಜಗಳದ ವಿಚಾರವಾಗಿ ಮಾತನಾಡಿದ ಯತ್ನಾಳ್, ಮನೆ-ಮನದ ಕಾಂಪೌಂಡ್ ಕಿತ್ತುಹಾಕಿ ಒಂದಾಗಿ. ರೆಡ್ಡಿ-ಶ್ರೀರಾಮುಲು ನಡುವೆ ಹುಳಿಹಿಂಡಿದ್ದಾರೆ. ಇಬ್ಬರ ನಡುವೆ ಪಿತೂರಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಸ್ಕೂಟಿಯಲ್ಲಿ ಓಡಾಡುತ್ತಿದ್ದವರು ಇಂದು ಹೆಲಿಕಾಪ್ಟರ್ ನಲ್ಲಿದ್ದೀರಿ. ಕಷ್ಟದಿಂದ ಮೇಲೆ ಬಂದಿದ್ದೀರಿ. ಮನಸ್ತಾಪ ಬಿಟ್ಟು ಇಬ್ಬರೂ ಒಂದಾಗಿ ಎಂದು ಸಲಹೆ ನೀಡಿದರು.