
ರಾಯಚೂರು: ಮಂತ್ರಿ ಸ್ಥಾನ ಬೇಕಾದವರು ದೆಹಲಿಗೆ ಹೋಗುತ್ತಾರೆ, ಬರುತ್ತಾರೆ. ನಾನು ಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ಕೇಳಿಲ್ಲ, ಆರಾಮಾಗಿದ್ದೇನೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಅವರು ಮಾತನಾಡಿ, ಸಚಿವ ಸ್ಥಾನ ಬೇಕಾದರೆ ದೆಹಲಿಗೆ ತೆರಳಿ ಅವರಿವರನ್ನು ಭೇಟಿಯಾಗಬೇಕು. ಕ್ಷೇತ್ರವನ್ನು ಬಿಟ್ಟು ಬೆಂಗಳುರಿನಲ್ಲಿ ಮುಖ್ಯಮಂತ್ರಿ ರಾಜ್ಯಾಧ್ಯಕ್ಷರ ಮನೆಗೆ ತಿರುಗಬೇಕು. ಮಂತ್ರಿ ಆಗುವುದಕ್ಕಿಂತಲೂ ಹೆಚ್ಚು ಅಧಿಕಾರದಲ್ಲಿ ನಾವಿದ್ದೇವೆ. ನಮ್ಮೆಲ್ಲ ಕೆಲಸಗಳನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ನಾವೇಕೆ ಸಚಿವರಾಗಬೇಕು ಎಂದು ಹೇಳಿದ್ದಾರೆ.
ಎಲ್ಲಾ ನಿಗಮ, ಮಂಡಳಿಗಳನ್ನು ವಿಸರ್ಜಿಸಿ ನಿಷ್ಠಾವಂತರಿಗೆ ಕೊಡಬೇಕಾಗಿತ್ತು. ನರೇಂದ್ರ ಮೋದಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯ ಬಿಜೆಪಿ ನಾಯಕರ ನೇತೃತ್ವದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.