ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 50 ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕರು ಸಿಎಂ ಅವರನ್ನು ಭೇಟಿಯಾಗಿದ್ದು, ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ್ ವಿರುದ್ಧ ದೂರು ನೀಡಲಾಗಿದೆ.
ಪಕ್ಷದ ನಾಯಕರ ಸೂಚನೆ ನಂತರವೂ ಯತ್ನಾಳ್ ಸದನದ ಒಳಗೆ, ಹೊರಗೆ ಸಿಎಂ ವಿರುದ್ಧ ಮಾತನಾಡುತ್ತಿದ್ದು ಹೈಕಮಾಂಡ್ ಗೆ ಈ ಕುರಿತಾಗಿ ಮನವರಿಕೆ ಮಾಡಿಕೊಡಬೇಕು. ಪಕ್ಷದಿಂದ ಅವರನ್ನು ಉಚ್ಛಾಟಿಸಬೇಕೆಂದು ಶಾಸಕರು ಸಿಎಂಗೆ ಒತ್ತಾಯಿಸಿದ್ದಾರೆ.
ಕೆಲವು ಸಚಿವರ ಕಾರ್ಯಶೈಲಿ ಬಗ್ಗೆಯೂ ಶಾಸಕರು ದೂರು ನೀಡಿದ್ದು, ಈ ಸಂಬಂಧ ಮಾರ್ಚ್ 25 ರಂದು ಸಭೆ ನಡೆಸಿ ಸಂಬಂಧಿಸಿದ ಸಚಿವರನ್ನು ಕರೆಸಿ ಪರಿಹಾರ ಸೂಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಯತ್ನಾಳ್ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಅದನ್ನು ಪಕ್ಷ ನೋಡಿಕೊಳ್ಳಲಿದೆ ಎಂದು ಸಮಾಧಾನಪಡಿಸಿದ್ದಾರೆ.
ಶಾಸಕರಾದ ಹರತಾಳು ಹಾಲಪ್ಪ, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಆರಗ ಜ್ಞಾನೇಂದ್ರ, ಎಂ.ಪಿ. ಕುಮಾರಸ್ವಾಮಿ ಮೊದಲಾದವರಿದ್ದರು.