ಬೆಳಗಾವಿ: ಒಂದು ವರ್ಷದಲ್ಲಿ ರಾಜ್ಯದಲ್ಲಿ ಎಲ್ಲಾ ಯೋಜನೆ ಬಂದ್ ಆಗಲಿವೆ. ಸರ್ಕಾರಿ ನೌಕರರಿಗೆ ಸಂಬಳ ಸಿಗದಂತಹ ಪರಿಸ್ಥಿತಿ ಬರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಮಕನಮರಡಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ನಂತರ ಕಾಂಗ್ರೆಸ್ ನವರು ಹೇಗೆ ಮಾಡುತ್ತಾರೆ ನೋಡಿ. ಈಗ 50% ಆಗಿದೆ. ಬಿಜೆಪಿಯನ್ನು ಟೀಕಿಸಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ. ಶಾಸಕರು ಅಭಿವೃದ್ಧಿ ಕೇಳಬೇಡಿ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ. ಕಾಂಗ್ರೆಸ್ ಶಾಸಕರೇ ತಕರಾರು ತೆಗೆದಿದ್ದಾರೆ. ನಮ್ಮ ಗ್ಯಾರೆಂಟಿ ಏನು ಎಂದು ಶಾಸಕರು ತಕರಾರು ತೆಗೆದಿದ್ದಾರೆ. ನಮ್ಮ ತೆರಿಗೆ ಎಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರು. 10,000 ಕೋಟಿ ರೂ. ಹಿಂದುಳಿದ ವರ್ಗಕ್ಕೆ ಕೊಡುತ್ತೇನೆ ಎಂದು ಹೇಳಿದ್ದರು. ಯಾರಪ್ಪಂದು ಕೊಡ್ತೀರಿ ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಮತ್ತೆ ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟ ಯತ್ನಾಳ್ ಮುಖ್ಯಮಂತ್ರಿ ಆಗಲು ನಾನು ಸಮರ್ಥನಿದ್ದೇನೆ. ನನ್ನ ಕೈಯಲ್ಲಿ 5 ವರ್ಷ ಅಧಿಕಾರ ಕೊಟ್ಟು ನೋಡಲಿ. ಈಗ ಸಿಎಂ ಸಿದ್ದರಾಮಯ್ಯ 2,000 ರೂ. ಕೊಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾದರೆ 5000 ರೂ ಕೊಡುತ್ತೇನೆ ಎಂದು ಹೇಳಿದ್ದಾರೆ.
ಜನರಿಗೆ ಬೇಕಾಗಿರುವುದು ನೀರಾವರಿ. ಅದನ್ನು ಕೊಡುತ್ತೇನೆ. ನಾನು ಮುಖ್ಯಮಂತ್ರಿ ಆದರೆ ಭ್ರಷ್ಟಾಚಾರ ಕಡಿಮೆ ಮಾಡುತ್ತೇನೆ. ಸಿಎಂ ಮಾಡದಿದ್ದರೆ ಹೀಗೆ ಒದರಾಡುತ್ತಾ ಹೋಗೋದು ಎಂದರು.
ಯತ್ನಾಳ್ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನನ್ನನ್ನು ಎಲ್ಲಿ ಮುಖ್ಯಮಂತ್ರಿ ಮಾಡುತ್ತಾರೆ? ಅಪ್ಪ -ಮಕ್ಕಳು ಕುಳಿತುಕೊಂಡಿದ್ದಾರೆ. ಮಗ ಮುಖ್ಯಮಂತ್ರಿ ಆಗುವುದನ್ನು ನೋಡಿ ಸಾಯಬೇಕೆಂದು ಕುಳಿತಿದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.
ಎಷ್ಟು ಕೆಪಾಸಿಟಿ ಇದ್ದರೂ ಏನು ಆಗದ ರೀತಿ ಆಗಿದ್ದೇವೆ. ನನಗೂ ಮುಖ್ಯಮಂತ್ರಿ ಆಗಬೇಕೆಂದು ಧಮ್ಮಿದೆ. ಈ ಸಾರಿ ಬಿಡುವುದಿಲ್ಲ, ನೋಡ್ತಾ ಇರಿ, ಮುಖ್ಯಮಂತ್ರಿ ಆಗುತ್ತೇನೆ. ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡಲು ವಿರೋಧಿಸಿದರೆ ಮುಂದಿನ ಸಾರಿ ಚುನಾವಣೆಯಲ್ಲಿ ನಾವು ಬೆನ್ನು ಹತ್ತುತ್ತೇವೆ. ಇವರನ್ನು ಸೋಲಿಸಿ ಎಂದು ನಾವೇ ಬೆನ್ನು ಹತ್ತುತ್ತೇವೆ. ಬೊಮ್ಮಾಯಿ ಅವರನ್ನು ಮಾಡಿದ ಹಾಗೆ ಮಾಡಬೇಕು. ನಾಲ್ಕು ತಿಂಗಳಾದರೂ ನಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಯತ್ನಾಳ್ ಹೇಳಿದ್ದಾರೆ.