ಕಾರವಾರ: ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಲಿದೆ ಎಂದು ಹೈಕಮಾಂಡ್ ನನಗೆ ಭರವಸೆ ನೀಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಮಾತನಾಡಿದ ಅವರು, ಅಸಮಾಧಾನಿತರೆಲ್ಲರೂ ವೈಯಕ್ತಿಕ ವಿಚಾರ ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಒಟ್ಟಿಗೆ ಕೆಲಸ ಮಾಡಬೇಕು. ಹಿಂದುತ್ವದ ರಾಜಕಾರಣಿಗಳನ್ನು ಯಾವತ್ತೂ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈಶ್ವರಪ್ಪ ಹೇಳುವ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಮುಜುಗರ ಆಗದ ರೀತಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಬದಲು ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆ 103 ಸ್ಥಾನ ಗೆಲ್ಲಿಸುತ್ತಿದ್ದೆ. ಹುಬ್ಬಳ್ಳಿ ಪೋಲಿಸ್ ಠಾಣೆ ಗಲಾಟೆ, ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸಂದರ್ಭದಲ್ಲಿ ಎನ್ಕೌಂಟರ್ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಿಂದೂ ಕಾರ್ಯಕರ್ತರು ನಿರಾಸಕ್ತಿ ತೋರಿಸಿದ್ದರಿಂದ ನಾವು ಸೋತಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.