ವಿಜಯಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿ, ಸಿಎಂ ಯಡಿಯೂರಪ್ಪ ಸಾಮರ್ಥ್ಯವನ್ನು ಕೂಡ ಪ್ರಶ್ನಿಸಿದ್ದು, ಯೋಗೇಶ್ವರ್ ವಿಚಾರ ಮತ್ತು ಕೋರೋನಾ ನಿರ್ವಹಣೆ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ.
ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಇದು ಯಡಿಯೂರಪ್ಪನವರ ಸರ್ಕಾರವಲ್ಲ, ವಿಜಯೇಂದ್ರನ ಸರ್ಕಾರವಾಗಿದೆ ಎಂದು ಸಿಎಂ ಪುತ್ರ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಗೆ ಹೋಗಬೇಕಿತ್ತು. ವಿಜಯೇಂದ್ರ ಅವರದೇನು ಕೆಲಸ. ಇದು ಯಡಿಯೂರಪ್ಪನವರ ಸರ್ಕಾರವಲ್ಲ, ವಿಜಯೇಂದ್ರ ಸರ್ಕಾರ ಎನ್ನುವುದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಕೆಲಸಕ್ಕೆ ಸಿಎಂ ದೆಹಲಿಗೆ ಹೋಗಬೇಕಾಗಿತ್ತು. ವಿಜಯೇಂದ್ರ ಹೋಗಿದ್ದಾರೆ. ಇದು ವಿಜಯೇಂದ್ರನ ಸರ್ಕಾರ ಎನ್ನುವುದು ಮೇಲಿಂದ ಮೇಲೆ ಸಾಬೀತಾಗಿದೆ. ಹಿಂದೆ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಹೋಗಿದ್ದರು ಎಂದು ಹೇಳಿದ್ದಾರೆ.
ಸಿ.ಪಿ. ಯೋಗೇಶ್ವರ್ ಮೇಲೆ ಕ್ರಮ ಕೈಗೊಳ್ಳುವ ಶಕ್ತಿ ಯಡಿಯೂರಪ್ಪನವರಿಗೆ ಇಲ್ಲ. ಏಕೆಂದರೆ ಯೋಗೇಶ್ವರ ಮೇಲೆ ಕ್ರಮ ಕೈಗೊಂಡರೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ. ಯೋಗೇಶ್ವರ್ ಗೆ ಉಪಮುಖ್ಯಮಂತ್ರಿ ಮಾಡಿ ಇಂಧನ ಸಚಿವರನ್ನಾಗಿ ಮಾಡಿದರೂ ಅಚ್ಚರಿಯಿಲ್ಲ. ಮುರುಗೇಶ್ ನಿರಾಣಿ, ಯೋಗೇಶ್ವರ, ಎನ್.ಆರ್. ಸಂತೋಷ ಒಂದೇ ಕೋಟಾದಲ್ಲಿ ಮಂತ್ರಿಯಾದವರು. ಜಿಂದಾಲ್ ಗೆ ಭೂಮಿ ನೀಡಿದ ವಿಚಾರ ಗಂಭೀರ ವಿಚಾರವಾಗಿದೆ. ಪಕ್ಷದ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕೊರೋನಾ ನಿರ್ವಹಣೆ ಕರ್ನಾಟಕದಲ್ಲಿ ಸಮರ್ಪಕವಾಗಿಲ್ಲ ಎನ್ನುವುದರ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಯತ್ನಾಳ್ ಮಹತ್ವದ ಹೇಳಿಕೆ ನೀಡಿದ್ದಾರೆ.