ಮೈಸೂರು: ನನ್ನ ಬಳಿ ಸಿಎಂ ಭ್ರಷ್ಟಾಚಾರದ ಬ್ರಹ್ಮಾಸ್ತ್ರವಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಭ್ರಷ್ಟಾಚಾರ ಬಯಲು ಮಾಡಿದರೆ ಯಡಿಯೂರಪ್ಪನವರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಮಠ ಬಿಟ್ಟು ಹೋಗಬೇಕಾಗುತ್ತದೆ. ಮಠಾಧೀಶರು ಸಿಎಂ ಪರ ಬ್ಯಾಟಿಂಗ್ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ಧನಾಗಿದ್ದೇನೆ. ಆದರೆ, ನಾನು ಅರ್ಜುನನ ಆಗುತ್ತೇನೆ. ಈಗ ವನವಾಸ, ಅಜ್ಞಾತವಾಸ ಎಲ್ಲವೂ ಕೂಡ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಬಾಕಿ ಇದೆ. ನಾಯಕತ್ವ ಬದಲಾಗುತ್ತದೆ ಎಂಬ ವಿಶ್ವಾಸವಿದೆ. ನಾನು ಏಕಾಂಗಿಯಲ್ಲ, ಸಾಕಷ್ಟು ಸಚಿವರು ಸಂಪರ್ಕದಲ್ಲಿ ಇದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತವಾದ ಹೋರಾಟವಾಗಿದೆ ಎಂದು ಹೇಳಿದ್ದು ಹೋರಾಟ ಮುಂದುವರೆಸುವಂತೆ ನನಗೆ ತಿಳಿಸಿದ್ದಾರೆ ಎಂದರು.
ಕೆಲವೇ ದಿನಗಳಲ್ಲಿ ನನ್ನ ಹೋರಾಟದ ಫಲ ಸಿಗುತ್ತದೆ. ಬಾಯಿಮಾತಿನ ಮಾತು ಎನ್ನುವವರಿಗೆ ದಾಖಲೆಯ ಮೂಲಕ ಉತ್ತರ ನೀಡುತ್ತೇವೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.