ಮೈಸೂರು: ರಾಜ್ಯವನ್ನು ಲೂಟಿ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ದುಷ್ಟರನ್ನು ನಾಶಮಾಡುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದು ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ದೇವಿ ದರ್ಶನ ಪಡೆದ ಅವರು ಮಾತನಾಡಿ, ವಿರೋಧ ಪಕ್ಷ, ಆಡಳಿತ ಪಕ್ಷದಲ್ಲಿ ಇರುವವರು ಲೂಟಿಗೆ ಇಳಿದಿದ್ದಾರೆ. ನನ್ನ ಹೋರಾಟ ಆದಷ್ಟು ಬೇಗನೆ ಮುಗಿಯಲಿದೆ. ರಾಜ್ಯದಲ್ಲಿ ಬಿಜೆಪಿ ಉಳಿಯಬೇಕಾದರೆ ಬದಲಾವಣೆ ಆಗಬೇಕಿದೆ. ವಿರೋಧ ಪಕ್ಷದವರಿಗೆ ದುಡ್ಡು ಹೋಗುತ್ತಿದೆ. ಈಗಾಗಿ ಸುಮ್ಮನಿದ್ದಾರೆ. ವಿರೋಧಪಕ್ಷದವರು ಯಾವುದನ್ನು ಪ್ರಶ್ನಿಸುತ್ತಿಲ್ಲ ಎಂದು ಶಾಸಕ ಯತ್ನಾಳ್ ದೂರಿದ್ದಾರೆ.
ಅವರೆಲ್ಲರೂ ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ. ಲಿಂಗಾಯಿತರು ತಲೆತಗ್ಗಿಸುವ ರೀತಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಯುತ್ತಿದೆ. ದಕ್ಷಿಣೆ ಕೊಟ್ಟಿದ್ದಕ್ಕೆ ಮಠಾಧೀಶರು ಮುಖ್ಯಮಂತ್ರಿ ಪರವಾಗಿ ಮಾತನಾಡುತ್ತಿದ್ದಾರೆ. ಮಠಗಳು ಧರ್ಮಕಾರ್ಯಗಳನ್ನು ಮಾಡಬೇಕು. ಮಠಗಳು ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಒಂದು ದಿನಕ್ಕೆ 100 ಕೋಟಿ ರೂಪಾಯಿ ಲೂಟಿಯಾಗುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಎಲ್ಲಾ ವ್ಯವಹಾರ ನಡೆಯುತ್ತದೆ ಎಂದು ಆರೋಪಿಸಿದ್ದಾರೆ.
ಸಚಿವ ಶ್ರೀರಾಮುಲು ಅವರನ್ನು ಮುಗಿಸಲು ಪ್ರಯತ್ನಿಸಲಾಗುತ್ತಿದೆ. ಲಿಂಗಾಯಿತರು ಮತ್ತು ಕುರುಬರ ನಾಯಕತ್ವವನ್ನು ಮುಗಿಸಲಾಗುತ್ತಿದೆ. ಕರ್ನಾಟಕ ಇಂಥ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ನವರು ಮುಖ್ಯಮಂತ್ರಿ ಯಡಿಯೂರಪ್ಪನವರ ಎಂಜಲು ತಿಂದು ಬದುಕುತ್ತಿದ್ದಾರೆ ಎಂದು ಟೀಕಿಸಿದ್ದು, ಎರಡು ದಿನಗಳಲ್ಲಿ ಮಾಧ್ಯಮದವರಿಗೆ ದಾಖಲೆಗಳನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ.