ಮೈಸೂರು: ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ನಾನು ಅಂದು ಮಾತನಾಡಿದ್ದು ಸಿಎಸ್ ಆರ್ ಫಂಡ್ ಬಗ್ಗೆ. ಅದನ್ನು ಅನಗತ್ಯವಾಗಿ ವರ್ಗಾವಣೆ ದಂಧೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಸಿಎಂ ಬಗ್ಗೆ ಆರೋಪ ಮಾಡಬೇಕಾದರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ವರ್ಗಾವಣೆ ದಂಧೆ ಎಂದು ಆರೋಪಿಸಲು ನಾನಾಗಲಿ, ನಮ್ಮ ತಂದೆಯಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ. ಪದೇ ಪದೇ ಅವರು ದಂಧೆ ಎಂದು ಆರೋಪ ಮಾಡುವುದು ಎಂದರೆ ಏನರ್ಥ? ಅನಗತ್ಯವಾಗಿ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ಸ್ ಪೆಕ್ಟರ್ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ನನ್ನ ಕ್ಷೇತ್ರದಲ್ಲಿ ವಿವೇಕಾನಂದ ಅಂತ ಬಿಇಒ ಕೂಡ ಇದ್ದಾರೆ. ಸಿಎಸ್ ಆರ್ ಫಂಡ್ ಲಿಸ್ಟ್ ಬಗ್ಗೆ ಮಾತನಾಡಿದರೆ ವರ್ಗಾವಣೆ ಲಿಸ್ಟ್ ಎಂದು ಕುಮಾರಸ್ವಾಮಿ ಕಥೆ ಕಟ್ಟುತ್ತಿದ್ದಾರೆ. ಅವರು ಕೂಡ ಮಾಜಿ ಸಿಎಂ ಆಗಿದ್ದವರು, ಅವರ ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಪ್ರತಿ ಸರ್ಕಾರದಲ್ಲಿಯೂ ಸಾಮಾನ್ಯ ವರ್ಗಾವಣೆ ನಡೆಯುತ್ತಿರುತ್ತದೆ ಇದನ್ನು ದಂಧೆ, ಹಣ ಪಡೆದು ಮಾಡುತ್ತಿದ್ದಾರೆ ಎಂದು ಆರೋಪಿಸುವುದಾದರೆ ಅವರು ಸಿಎಂ ಆಗಿದ್ದಾಗಲೂ ದಂಧೆ ಮಾಡ್ತಿದ್ರಾ? ನಮ್ಮ ಬಗ್ಗೆ ಆರೋಪ ಮಾಡುತ್ತಾರೆ ಎಂದಾದರೆ ನಾವು ಅವರ ಕುಟುಂಬದವರ ಮೇಲೂ ಆರೋಪಗಳನ್ನು ಮಾಡಬಹುದಲ್ಲಾ? ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಹಣ ವರ್ಗಾವಣೆ, ದಂಧೆ ಮಾಡಿದ್ದಾರೆ ಅನ್ಸತ್ತೆ ಅದಕ್ಕೆ ಈಗ ನಮ್ಮ ಸರ್ಕಾರದ ವಿರುದ್ಧ ಈ ರೀತಿ ಆರೋಪ ಮಾಡುತ್ತಿದ್ದಾರೆ. ಹೆಚ್.ಡಿ.ಕೆ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.