ಮೈಸೂರು: ಲೋಕಸಭಾ ಚುನಾವಣೆ ಮತದಾನ ಸಮೀಪಿತ್ತಿದ್ದಂತೆ ರಾಜಕೀಯ ನಾಯಕರ ಮಾತಿನ ಲಡಾಯಿ ಜೋರಾಗಿದೆ. ಕಾಂಗ್ರೆಸ್ ನವರು ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚಲಿದ್ದಾರೆ, ನುಸುಳುಕೋರರಿಗೆ ಹಂಚಲಿದ್ದಾರೆ. ಸಹೋದರಿಯರೇ ನಾಳೆ ನಿಮ್ಮ ಮಂಗಳಸೂತ್ರವೂ ಇರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ತಮ್ಮ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕೆಂಡ ಕಾರಿದ್ದು, ದೇಶದ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ, ಈ ದೇಶದ ಸಂವಿಧಾನದ ಬಗ್ಗೆ ಅರಿವಿರಲಿ ಎಂದು ಕಿಡಿಕಾರಿದ್ದರು. ಇದೀಗ ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲು ಹೋಗಿ ಸಿಎಂ ಸಿದ್ದರಾಮಯ್ಯ ಪುತ್ರ ಹೊಸ ವಿವಾದ ಸೃಷ್ಟಿಸಿದ್ದಾರೆ.
ಪ್ರಧಾನಿ ಮೋದಿ ಹೇಳಿಕೆಗೆ ಮೈಸೂರಿನಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿರುವ ಡಾ.ಯತೀಂದ್ರ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಂತಹ ಸ್ಥಿತಿ ಬರುತ್ತದೆ. ಮಹಿಳೆಯರ ಮಾಂಗಲ್ಯವಿರಲ್ಲ. ಮಹಿಳೆಯರು ತಮ್ಮ ಗಂಡಂದಿರು, ಮಕ್ಕಳನ್ನು ಕಳೆದುಕೊಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಕೋಮುಗಲಭೆ, ದೊಂಬಿಗಳನ್ನು ಮಾಡಿ ಸಾಯುವಂತೆ ಮಾಡ್ತಾರೆ. ಜನರನ್ನು, ಯುವಕರನ್ನು ಗಲಭೆಯಲ್ಲಿ ತೊಡಗಿಸಿ ಶಿಕ್ಷಣ ವಂಚಿತರನ್ನಾಗಿ, ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ ಎಂದು ಹೆಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಪ್ರಧಾನಿ ಮೋದಿಯವರು ತುಚ್ಛವಾಗಿ ಮಾತನಾಡುತ್ತಿದ್ದಾರೆ. ಮತೀಯ ಭಾವನೆ ಕೆರಳಿಸುವ ರೀತಿಯಲ್ಲಿ ಮಾತನಡುತ್ತಿದ್ದಾರೆ. ಇದು ಖಂಡನೀಯ ಎಂದರು.
ಪ್ರಧಾನಿ ಮೋದಿ ಹೇಳಿಕೆಗೆ ಖಂಡಿಸುವ ಬರದಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತಾವೇ ವಿವಾದಾತ್ಮಕ ಹೇಳಿಕೆ ನೀಡಿ, ವಿವಾದಕ್ಕೆ ಕಾರಣರಾಗಿದ್ದಾರೆ.