ಮೈಸೂರು: ಮೈಸೂರಿನಲ್ಲಿ ಸಿಎಂ ಪುತ್ರ ಯತೀಂದ್ರ ಹವಾ ಮುಂದುವರೆದಿದೆ. ವರುಣಾ ಕ್ಷೇತ್ರದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಯತೀಂದ್ರ ನಿರಂತರ ಜನ ಸಂಪರ್ಕ ಸಭೆ ನಡೆಸುತ್ತಿದ್ದು, ಜನ ಅವರಿಗೆ ಮನವಿ ಸಲ್ಲಿಸಲು ಮುಗಿಬಿದ್ದಿದ್ದಾರೆ.
ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ಯತೀಂದ್ರ ಜನ ಸಂಪರ್ಕ ಸಭೆ ನಡೆಸಿದ್ದು, ಎಲ್ಲರ ಮನವಿ ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ ಯತೀಂದ್ರ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದಾರೆ.
ಅಲ್ಲದೇ, ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಕರೆ ಮೂಲಕ ಯತೀಂದ್ರ ಮಾತನಾಡಿದ್ದಾರೆ. ಅಪ್ಪ ಹೇಳಿ ಎಂದು ಮಾತು ಆರಂಭಿಸುವ ಅವರು ತಾನು ನೀಡಿದ ಪಟ್ಟಿಯ ಬಗ್ಗೆ ಮಾತನಾಡಿ ವಿವೇಕಾನಂದರ ಹೆಸರು ಪ್ರಸ್ತಾಪಿಸಿ ಇದಕ್ಕೆ ಯಾರು ಎಂದು ಕೇಳಿದ್ದಾರೆ. ಬೇರೊಂದು ಲಿಸ್ಟ್ ನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹಾದೇವರಿಗೆ ಫೋನ್ ನೀಡುವಂತೆ ಸಿದ್ದರಾಮಯ್ಯರಿಗೆ ತಿಳಿಸುತ್ತಾರೆ. ನಂತರ ಮಹದೇವ ಜೊತೆ ಮಾತನಾಡಿ, ಯಾಕೆ ಯಾವುದ್ಯಾವುದೋ ಕೊಡ್ತೀಯಾ? ಮತ್ತೆ ಇದೆಲ್ಲ ಯಾರು ಕೊಡ್ತಿರೋದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಅದೆಲ್ಲ ಬೇಡಮ ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟನ್ನು ಮಾತ್ರ ಮಾಡಿ ಎಂದು ಮಹದೇವರಿಗೆ ಸೂಚಿಸುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು, ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.