ಬೆಂಗಳೂರು : 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಕ್ಕರ್, ಇಸ್ತ್ರಿಪೆಟ್ಟಿಗೆ ಹಂಚಿದ್ದರಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಇದೀಗ ಭಾರೀ ವೈರಲ್ ಆಗುತ್ತಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಹೇಳಿಕೆ ವ್ಯಾಪಕ ಸುದ್ದಿಯಾಗುತ್ತಿದ್ದಂತೆ ಯತೀಂದ್ರ ಸಿದ್ದರಾಮಯ್ಯ ಯೂ ಟರ್ನ್ ಹೊಡೆದಿದ್ದಾರೆ. ಚುನಾವಣೆಗಾಗಿ ಇದನ್ನು ಹಂಚಿದ್ದಲ್ಲ, ಚುನಾವಣೆಗೂ ಇದಕ್ಕೂ ಸಂಬಂಧವೇ ಇಲ್ಲ, ನೀತಿ ಸಂಹಿತೆಗೂ ಮುನ್ನವೇ ಇದನ್ನು ಹಂಚಲಾಗಿದೆ ಎಂದು ಹೇಳಿದ್ದಾರೆ.
ನಾನು ಸಿದ್ದರಾಮಯ್ಯ ಚುನಾವಣೆಗೊಸ್ಕರ ಕುಕ್ಕರ್ ಕೊಟ್ಟಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ನಾನು ಹೇಳಿರುವುದೇ ಒಂದು ಮಾಧ್ಯಮಗಳು ತೋರಿಸುತ್ತಿರುವುದೇ ಒಂದು ಎಂದರು, ಆದರೂ ನಾನು ಮಾತನಾಡುವಾಗ ಸರಿಯಾಗಿ ಮಾತನಾಡದೇ ಇರಬಹುದು. ನನ್ನ ಹೇಳಿಕೆಯಿಂದ ಆ ರೀತಿಯ ಅರ್ಥ ಬಂದಿರಬಹುದು. ಆದರೆ, ಇದು ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮವೇ ಅಲ್ಲʼʼ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಂಜನಗೂಡಿನಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಡಿವಾಳರ ಸಮುದಾಯ ಭವನದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದರು. 2023 ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಬೇಕೆಂದು, ಸಾವಿರಾರು ಜನರನ್ನು ಸೇರಿಸಿ ಅವರೆಲ್ಲರಿಗೂ ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ನೀಡಲಾಗಿತ್ತು. ಆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಅವುಗಳನ್ನು ಕೊಡಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಪುತ್ರ, ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು. ಮತದಾರರಿಗೆ ಕುಕ್ಕರ್, ಐರನ್ ವಾಕ್ಸ್ ಹಂಚಿದ್ದರಿಂದಲೇ ತಮ್ಮ ತಂದೆ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಯತಿಂದ್ರ ಅವರು ಬಹಿರಂಗ ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಕೊಡಲು ಕೂಡ ಸಜ್ಜಾಗಿತ್ತು.
ಚುನಾವಣೆ ಗೆಲುವಿಗೆ ವಾಮಮಾರ್ಗವೇ ರಾಜಮಾರ್ಗ
ಚುನಾವಣೆ ಗೆಲುವಿಗೆ ವಾಮಮಾರ್ಗವೇ ರಾಜಮಾರ್ಗವೆಂದು ಭಾವಿಸಿರುವ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ಜನರಿಗೆ ಸುಳ್ಳು ಅಮಿಷಗಳನ್ನು ನೀಡಿ ಕುಕ್ಕರ್, ಇಸ್ತ್ರಿ ಪೆಟ್ಟಿಗೆಗಳ ಆಸೆ ಹುಟ್ಟಿಸಿ ಅಕ್ರಮವಾಗಿ ಮತಗಳನ್ನು ಗಿಟ್ಟಿಸಿಕೊಂಡಿದ್ದಾರೆ. ತರೀಕೆರೆ ಟಿಕೆಟ್ ಅಕಾಂಕ್ಷಿಯಾಗಿದ್ದ ಗೋಪಿಕೃಷ್ಣ ಅವರೇ ಹೇಳಿರುವಂತೆ ಅವರಿಂದ ₹2 ಕೋಟಿ ಪೀಕಿದ್ದು ಇದೇ ರೀತಿ ಮತದಾರರಿಗೆ ಆಮಿಷ ಒಡ್ಡುವುದಕ್ಕಾಗಿಯೇ ಇರಬಹುದು. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅನೈತಿಕ-ಅಕ್ರಮ ಚಟುವಟಿಕೆಗೆ ಅಪ್ಪ-ಮಗ ಇಳಿದಿರುವ ಕಾರಣದಿಂದಲೇ ಗೆಲುವು ಲಭಿಸುತ್ತಿದೆ. ಚುನಾವಣೆಯ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಸಿದ್ದರಾಮಯ್ಯ ಅವರು ಗೆದ್ದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಅನರ್ಹತೆಯೊಂದೇ ಮುಂದಿರುವ ದಾರಿ ಎಂದು ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.