ಬೆಂಗಳೂರು: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ಮಾರ್ಚ್ ವೇಳೆಗೆ ಯಶಸ್ವಿನಿ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ.
ರೈತ ಮುಖಂಡರು ಯಶಸ್ವಿನಿ ಯೋಜನೆ ಜಾರಿಗೆ ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದೆ ಎನ್ನಲಾಗಿದೆ. ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳ ಸದಸ್ಯರು ವಾರ್ಷಿಕ 300 ರೂ. ಮತ್ತು ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರು 710 ವಂತಿಗೆ ಪಾವತಿಸಿ ಹೈಟೆಕ್ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.
ಬಡವರು, ರೈತರಿಗೆ ಯೋಜನೆಯಿಂದ ಅನುಕೂಲವಾಗಿತ್ತು. ಆದರೆ, ಕಾರಣಾಂತರದಿಂದ ಯೋಜನೆಯನ್ನು ರದ್ದುಪಡಿಸಲಾಗಿತ್ತು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಯಶಸ್ವಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ರೈತರಿಂದ ಭಾರಿ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.