ಕೊಪ್ಪಳ: ಕೈಮಗ್ಗ ಮತ್ತು ಜವಳಿ ಇಲಾಖೆ(ಜಿ.ಪಂ) ವತಿಯಿಂದ 2022-23ನೇ ಸಾಲಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಲು ಹಾಗೂ ಸದಸ್ಯ ನೇಕಾರರು ನೋಂದಾಯಿಸಿಕೊಳ್ಳಲು ತಿಳಿಸಿದೆ.
ರಾಜ್ಯದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯು ನೇಕಾರ ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ಒಂದು ವಿಶೇಷ ಯೋಜನೆಯಾಗಿದ್ದು, ಇದರಲ್ಲಿ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿ 5 ಲಕ್ಷ ರೂ.ಗಳಿಗೆ ನಿಗದಿಪಡಿಸಿದೆ.
ರಾಜ್ಯದ ಯಾವುದೇ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲು ಅನುವಾಗುವಂತೆ ನೋಂದಣಿಯನ್ನು ನವೆಂಬರ್ 1 ರಿಂದಲೇ ಪ್ರಾರಂಭಿಸಲಾಗಿದ್ದು, ಕೊಪ್ಪಳ ಜಿಲ್ಲೆಯ ಎಲ್ಲ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ನೇಕಾರರು, ತಾವು ಸದಸ್ಯತ್ವ ಹೊಂದಿದ ಕೈಮಗ್ಗ ವಿದ್ಯುತ್ ಮಗ್ಗ ಸಹಕಾರ ಸಂಘಗಳ ಮೂಲಕ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಆಶೋಕ ಸರ್ಕಲ್ ಹತ್ತಿರ ಕೊಪ್ಪಳ, ದೂರವಾಣಿ ಸಂಖ್ಯೆ: 08539-295469 ಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.