ಬೆಂಗಳೂರು: ರಾಜ್ಯದಲ್ಲಿ ಮರು ಜಾರಿಗೊಳಿಸಲಾದ ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಆಯುಷ್ಮಾನ್ ಭಾರತ್ ಯೋಜನೆ ದರಕ್ಕಿಂತ ಯಶಸ್ವಿನಿ ಚಿಕಿತ್ಸಾ ದರ ಕಡಿಮೆ ಇದ್ದಲ್ಲಿ ಅಂತಹ ಚಿಕಿತ್ಸಾ ದರಗಳನ್ನು ಹಿಂದೆ ಜಾರಿಯಲ್ಲಿದ್ದ ದರಕ್ಕೆ ಸಮನಾಗಿ ಅಳವಡಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ಆಯುಷ್ಮಾನ್ ಭಾರತೀಯ ಯೋಜನೆಯಡಿ ಜಾರಿಯಲ್ಲಿರುವ ಕೆಲವು ಚಿಕಿತ್ಸೆ ದರಗಳು ಕಡಿಮೆ ಇದ್ದು, ಇವುಗಳನ್ನು ಗುರುತಿಸಿ ಪರಿಷ್ಕರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ಹಿಂದೆ ಯಶಸ್ವಿನಿ ಯೋಜನೆಯಲ್ಲಿ 823 ವಿಧದ ಶಸ್ತ್ರಚಿಕಿತ್ಸೆ ಸೌಲಭ್ಯ ಇತ್ತು. ಮರು ಜಾರಿಗೊಳಿಸಲಾದ ಯಶಸ್ವಿನಿ ಯೋಜನೆಯಲ್ಲೇ 1,650 ಚಿಕಿತ್ಸೆ ಸೌಲಭ್ಯಗಳಿವೆ. 460 ಆಸ್ಪತ್ರೆಗಳು ಒಡಂಬಡಿಕೆ ಮಾಡಿಕೊಂಡಿದ್ದು, ಇವುಗಳ ಸಂಖ್ಯೆಯನ್ನು ಒಂದು ಸಾವಿರಕ್ಕೆ ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ.