ಬೆಂಗಳೂರು: ಯಶಸ್ವಿನಿ ವಿಮಾ ಯೋಜನೆ ನೋಂದಣಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
2022 -23ನೇ ಸಾಲಿನ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಹೊಸ ಸದಸ್ಯರ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಈ ನೋಂದಣಿ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಲಾಗಿದೆ.
ಡಿಸೆಂಬರ್ 31ರವರೆಗೆ ಯಶಸ್ವಿನಿ ಯೋಜನೆ ಸದಸ್ಯತ್ವ ನೋಂದಣಿ ಅವಧಿಯಲ್ಲಿ ಅರ್ಹ ಎಲ್ಲ ಸದಸ್ಯರ ನೋಂದಣಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನೋಂದಣಿ ಅವಧಿ ವಿಸ್ತರಿಸಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪತ್ರ ಬರೆದು ಅವಧಿ ವಿಸ್ತರಿಸಲು ಕೋರಿದ್ದು, ಅವಧಿ ವಿಸ್ತರಿಸಲಾಗಿದೆ.
ಈ ಯೋಜನೆಗೆ 30 ಲಕ್ಷ ನೋಂದಣಿ ಗುರಿ ಹೊಂದಲಾಗಿದ್ದು, ಸುಮಾರು 20 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಗ್ರಾಮೀಣ ಸಹಕಾರ ಸಂಘ, ಸ್ವಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂಪಾಯಿ ವಂತಿಗೆ, ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಹೆಚ್ಚುವರಿ ಸದಸ್ಯರು 100 ರೂ. ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ 1000 ರೂ., ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬಕ್ಕೆ ಹೆಚ್ಚುವರಿ ಸದಸ್ಯರಿಗೆ 200 ರೂಪಾಯಿ ವಂತಿಗೆ ನಿಗದಿಪಡಿಸಲಾಗಿದೆ.
ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷ ರೂ. ನಿಗದಿ ಪಡಿಸಲಾಗಿದ್ದು, ಯಾವುದೇ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.