ಹಾಸನ: ನಟ ರಾಕಿಂಗ್ ಸ್ಟಾರ್ ಯಶ್ ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ 80 ಎಕರೆ ಜಮೀನು ಖರೀದಿಸಿದ್ದು, ತಮ್ಮ ಜಮೀನಿಗೆ ಹೊಂದಿಕೊಂಡಿರುವ ರೈತರ ಜಮೀನು ಅತಿಕ್ರಮಿಸಿ ಬೇಲಿ, ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತಾಗಿ ದುದ್ದ ಹೋಬಳಿಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದು, ಅಗತ್ಯ ಕ್ರಮ ಕೈಗೊಂಡು ಸರ್ವೇ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.
ಯಶ್ ಅವರ ಜಮೀನಿಗೆ ರಸ್ತೆ, ಬೇಲಿ ಹಾಕಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರೊಂದಿಗೆ ವಾಗ್ವಾದ ನಡೆಸಲಾಗಿದೆ. ಬೆಂಗಳೂರಿನಿಂದ ಗೂಂಡಾಗಳೊಂದಿಗೆ ಆಗಮಿಸಿ ಬೆದರಿಕೆ ಹಾಕಿದ್ದಾರೆ. ಬಡ ರೈತರ ಮೇಲೆ ಸವಾರಿ ಮಾಡುವುದು ಒಳ್ಳೆಯದಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.
ಯಶ್ ಅವರ ಜಮೀನಿನ ಅಕ್ಕಪಕ್ಕದಲ್ಲಿರುವವರು ಅಲ್ಪಸ್ವಲ್ಪ ಜಮೀನು ಹೊಂದಿದ್ದು ಅದರ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಯಶ್ ಕುಟುಂಬಸ್ಥರಿಂದ ಕಿರುಕುಳ ನೀಡಲಾಗುತ್ತಿದೆ. ಅವರ ಜಮೀನಿಗೆ ಹೋಗಲು ಒಳ್ಳೆಯ ದಾರಿ ಇದ್ದರೂ ಪಕ್ಕದ ಬಡ ರೈತರ ಭೂಮಿಯನ್ನು ಬಳಸಲಾಗುತ್ತಿದೆ. ತಹಶೀಲ್ದಾರ್ ಮೂಲಕ ಕೂಡಲೇ ಸರ್ವೆ ಮಾಡಿಸಿ ರೈತರ ಜಮೀನು ಉಳಿಸಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ರೈತ ಮುಖಂಡರು ಮನವಿ ಮಾಡಿದ್ದಾರೆ.
ಈ ಪ್ರಕರಣ ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.