ಮುಂಬೈ: ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ದಲ್ಲಿ ರಾವಣನ ಪಾತ್ರಧಾರಿಯಾಗಿ ನಟಿಸುತ್ತಿರುವುದಾಗಿ ರಾಕಿಂಗ್ ಸ್ಟಾರ್ ಯಶ್ ಘೋಷಿಸಿದ್ದಾರೆ.
ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ತಾವು ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿಸಲು ಖುಷಿಯಾಗುತ್ತಿದೆ ಎಂದಿದ್ದಾರೆ.
ರಾಮಾಯಣದಲ್ಲಿ ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಹಾಗೂ ನಟಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯಶ್ ರಾವಣನಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ಸ್ವತಃ ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ನಾನು ಕೂಡ ರಾಮಾಯಣದ ಭಾಗವಾಗಿರುವುದನ್ನು ಖಚಿತಪಡಿಸಲು ಹಾಗೂ ರಾವಣ ಪಾತ್ರದಲ್ಲಿ ನಟಿಸಲು ಸಾಕಷ್ಟು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
‘ರಾವಣ’ ಇದೊಂದು ಅದ್ಭುತ ಪಾತ್ರ. ರಾಮಾಯಣದಲ್ಲಿ ಬೇರೆ ಯಾವುದೇ ಪಾತ್ರ ಮಾಡುತ್ತೀರಾ? ಎಂದು ಕೇಳಿದ್ದರೆ ನನಗೆ ರಾವಣ ಪಾತ್ರವೇ ಮುಖ್ಯ ಎನ್ನುತ್ತಿದ್ದೆ. ಒಬ್ಬ ನಟನಾಗಿ ರಾವಣನ ಪಾತ್ರದಲ್ಲಿ ನಟಿಸುವುದು ಚಾಲೆಂಜಿಂಗ್ ಹಾಗೂ ರೋಮಾಂಚನಕಾರಿ. ರಾಮಾಯಣ ಒಂದು ದೊಡ್ಡ ಪ್ರಾಜೆಕ್ಟ್. ಇದು ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ… ರಾವಣನ ಪಾತ್ರಕ್ಕೆ ಕಥೆಗೆ ತಕ್ಕಂತೆ ನ್ಯಾಯ, ಗೌರವ ಒದಗಿಸುವ ನಿಟ್ಟಿನಲ್ಲಿ ಯತ್ನಿಸುವುದಾಗಿ ತಿಳಿಸಿದ್ದಾರೆ.
ಇನ್ನು ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರದಲಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ದಕ್ಷಿಣದ ನಟಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ರಾಮ ಮತ್ತು ಸೀತೆಯ ಚಿತ್ರಗಳು ಸೋಷಿಯ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿವೆ.