ಕಾರವಾರ: ಕಂಟೇನರ್ ಲಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಸಕ್ಕರೆ ತುಂಬಿಕೊಂಡು ಚಲಿಸುತ್ತಿದ್ದ ಲಾರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬೆಂಕಿ ತಗುಲಿದೆ. ಲಾರಿ ಬಾಗಲಕೋಟೆಯಿಂದ ಕೇರಳಕ್ಕೆ ಸಕ್ಕರೆ ಸಾಗಿಸುತ್ತಿತ್ತು. ಬ್ರೇಕ್ ಲೈನರ್ ನಲ್ಲಿ ಉಷ್ಣಾಂಶ ಹೆಚ್ಚಾಗಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮತ್ತು ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ ಕೆಳಗೆ ಇಳಿದಿದ್ದಾರೆ. ಈ ವೇಳೆಗಾಗಲೇ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ ಸಕ್ಕರೆ ಕೂಡ ಕರಗಿ ನೀರಾಗಿ ಹರಿದಿದೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸುಟ್ಟ ಲಾರಿಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.