ಬೆಂಗಳೂರು: ಬಡಗುತಿಟ್ಟು ಯಕ್ಷಗಾನ ಭಾಗವತದ ಗಾನ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಸುಬ್ರಹ್ಮಣ್ಯ ಧಾರೇಶ್ವರ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿ ಇಂದು ಮುಂಜಾನೆ 4:30ರ ಸುಮಾರಿಗೆ ಧಾರೇಶ್ವರ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ 45 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದರು. ಸಾಂಪ್ರದಾಯಿಕ ಶೈಲಿ ಜೊತೆ ಹೊಸ ಪ್ರಕಾರದ ಭಾಗವತ ಪದ್ಯಗಳನ್ನು ಹಾಡಿ ಯಶಸ್ವಿಯಾಗಿದ್ದರು. ಸುಬ್ರಹ್ಮಣ್ಯ ಧಾರೇಶ್ವರ್ ಅವರು ಪೆರ್ಡೂರು ಮೇಳ, ಕೋಟ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಭಾಗವತರಾಗಿ ಜನಪ್ರಿಯತೆ ಪಡೆದುಕೊಂಡಿದ್ದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾದ ಸುಬ್ರಹ್ಮಣ್ಯ ಧಾರೇಶ್ವರ್ ಯಕ್ಷಗಾನ ಭಾಗವತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ. ಆರಂಭದಲ್ಲಿ ಮೇಳದಲ್ಲಿ ಎಲೆಕ್ಟ್ರಿಷನ್ ಆಗಿ ಸೇರಿ ಬಳಿಕ ಯಕ್ಷಗಾನ ಲೋಕದ ಗಾಯನ ಕೋಗಿಲೆಯಾಗಿ ಮಿಂಚಿದ್ದರು. ತಂದೆ ಲಕ್ಷ್ಮೀನಾರಾಯಣ ಭಟ್ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು.
ಸುಬ್ರಹ್ಮಣ್ಯ ಧಾರೇಶ್ವರ್ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಅಭಿಮಾನಿಗಳು, ಯಕ್ಷಗಾನ ಕಲಾವಿದರು ಕಂಬನಿ ಮಿಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಸುಬ್ರಹ್ಮಣ್ಯ ಧಾರೇಶ್ವರ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾನ ಮಾಂತ್ರಿಕ, ಕರಾವಳಿ ಭಾಗದ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ್ ನಿಧನ ಸುದ್ದಿ ಕೇಳಿ ತೀವ್ರ ನೋವುಂಟು ಮಾಡಿದೆ. ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರ್ ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.