
ಯಾದಗಿರಿ: ವಿದವೆಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧವನ್ನೂ ಬೆಳೆಸಿ ಆಕೆಯಿಂದಲೇ ಲಕ್ಷಾಂತರ ರೂಪಾಯಿ ಹಣವನ್ನು ದೋಚಿ ಯುವಕನೊಬ್ಬ ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಸವಂತಪುರ ಗ್ರಾಮದಲ್ಲಿ ನಡೆದಿದೆ.
ಬಸವಂತಪುರ ಗ್ರಾಮದ ಯುವತಿಯನ್ನು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಅಮೀನಾಪುರ ಗ್ರಾಮದ ಬಸನಗೌಡ ಎಂಬಾತನಿಗೆ ಹತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಮುದ್ದಾದ ಗಂಡು ಮಗು ಕೂಡ ಇತ್ತು. ಸಂಸಾರ ಚನ್ನಾಗಿ ಸಾಗುತ್ತಿರುವಾಗಲೇ ಪತಿ ಬಸನಗೌಡ ಪಾರ್ಶ್ವವಾಯುನಿಂದ ಸಾವನ್ನಪ್ಪಿದ್ದರು. ಪತಿ ಸಾವಿನ ಬಳಿಕ ಮಗುವಿನೊಂದಿಗೆ ಮಹಿಳೆ ಬಸಂತಪುರದ ತವರು ಮನೆಗೆ ಬಂದು ಅಲ್ಲಿಯೇ ಇದ್ದಳು.
ಆಗಾಗ ಅಬ್ಬೆತುಮಕೂರು ಸ್ವಾಮೀಜಿಗಳನ್ನು ಭೇಟಿಯಾಗಿ ತನ್ನ ಕಷ್ಟಗಳನ್ನು ಮಹಿಳೆ ಹೇಳಿಕೊಳ್ಳುತ್ತಿದ್ದಳು. ಸ್ವಾಮೀಜಿ ನಿನ್ನ ಕಷ್ಟ ಪರಿಹಾರವಾಗಿ ಒಳ್ಳೆ ದಿನಗಳು ಬರುತ್ತವೆ ಎಂದು ಆಶಿರ್ವಾದ ಮಾಡಿ ಸಮಾಧಾನ ಮಾಡಿದ್ದರು. ಹೀಗೆ ಆಶ್ರಮಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಮಹಿಳೆಗೆ ಅಲ್ಲಿದ್ದ ಮಾಳಪ್ಪ ಹತ್ತಿಕುಣಿ ಎಂಬಾತನ ಪರಿಚಯವಾಗಿದೆ. ವಿದವೆ ಮಹಿಳೆಗೆ ನಯವಾಗಿ ಮಾತನಾಡಿ, ಒಳ್ಳೆಯವನಂತೆ ನಾಟಕವಾಡಿ ಸ್ನೇಹ ಸಂಪಾದಿಸಿದ್ದಾನೆ. ಅದಾಗಲೇ ಜೀವನದಲ್ಲಿ ನೊಂದ ಮಹಿಳೆ ತನ್ನ ಸಂಕಷ್ಟವನ್ನು ಹೇಳಿಕೊಕೊಂಡು ಕಣ್ಣಿರಿಟ್ಟಿದ್ದಾಳೆ. ಆಕೆಯ ನೋವು ಕೇಳಿ ಸಂಕಷ್ಟದಲ್ಲಿ ತಾನೂ ಭಾಗಿಯಾಗುವುದಾಗಿ ಹೇಳಿ ನಂಬಿಸಿ ಜೀವನದ ಜೊತೆಗಿರುವುದಾಗಿ ಪ್ರೀತಿಯ ನಾಟವಾಡಿದ್ದಾನೆ.
ಮಹಿಳೆಯನ್ನು ಮದುವೆಯಯಾಗುವುದಾಗಿ ನಂಬಿಸಿ, ಆಕೆಯ ಮನೆಯವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾನೆ. ಹೀಗೆ ಮಹಿಳೆ ಮಾಳಪ್ಪ ತನ್ನನ್ನು ಮದುವೆಯಾಗುತ್ತಾನೆ ಎಂದೇ ನಂಬಿದ್ದಳು. ಅಲ್ಲದೇ ತೆಲಂಗಾಣದಲ್ಲಿ ತನ್ನ ಹೆಸರಿಗೆ ಬಂದಿದ್ದ 4 ಎಕರೆ ಜಮೀನನ್ನು ಮಾರಿದ್ದಳು. ಅದರಲ್ಲಿ ಬಂದ ಹಣದಲ್ಲಿ 80 ಲಕ್ಷ ರೂಪಾಯಿಯನ್ನು ಮಾಳಪ್ಪ ತನಗೆ ಕೊಡು ಎಂದು ಪಡೆದುಕೊಂಡಿದ್ದ. ಅಲ್ಲದೇ ಆಗಾಗ ಆಕೆ ಹೆಸರಲ್ಲಿದ್ದ ಒಡವೆಯನ್ನೂ ಪಡೆದಿದ್ದಾನೆ. ಮದುವೆ ಬಗ್ಗೆ ಗಂಭೀರವಾಗಿ ಮಹಿಳೆ ಪ್ರಸ್ತಾಪ ಮಾಡುತ್ತಿದ್ದಂತೆ ಮಾಳಪ್ಪ ತನ್ನ ವರಸೆ ಬದಲಿಸಿದ್ದಾನೆ. ಮದುವೆಯಾಗದೇ, ಪಡೆದ ಹಣವನ್ನೂ ಹಿಂತಿರುಗಿಸದೇ ವಂಚಿಸಿ ಪರಾರಿಯಾಗಿದ್ದಾನೆ.
ನೊಂದ ಮಹಿಳೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ಆರೀಪಿಯನ್ನು ಬಂಧಿಸಿಲ್ಲ. ಇದರಿಂದ ಬೇಸತ್ತ ಮಹಿಳೆ ನ್ಯಾಯಕ್ಕಾಗಿ ಎಸ್ ಪಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.