ಯಾದಗಿರಿ: ಗುತ್ತಿಗೆದಾರರೊಬ್ಬರಿಗೆ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಯಾದಗಿರಿ ಲೋಕೋಪಯೋಗಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.
ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ 2017ರಲ್ಲಿ ಯಾದಗಿರಿ ನಗರದ ಅಂಬೇಡ್ಕರ್ ವೃತ್ತದಿಂದ ಹತ್ತಿಕುಣಿ ಕ್ರಾಸ್ ವರೆಗೆ ರಸ್ತೆ ಕಾಮಗಾರಿ ಕೈಗೊಂಡಿದ್ದರು. ಈ ಕಾಮಗಾರಿಗೆ ಬಾಕಿ ಹಣ 27 ಲಕ್ಷ ರೂಪಾಯಿ ಹಣವನ್ನು 2018ರಲ್ಲಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆ ನೀದಬೇಕಿತ್ತು. ಆದರೆ ಲೋಕೋಪಯೋಗಿ ಇಲಾಖೆ ಹಣ ನೀಡದೇ ಸತಾಯಿಸುತ್ತಿತ್ತು.
ಇದರಿಂದ ಬೇಸತ್ತ ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ ಕಲಬುರಗಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಶೇ.12ರಷ್ಟು ಬಡ್ಡಿಯೊಂದಿಗೆ ಬಾಕಿ ಹಣ ಪಾವತಿಸುವಂತೆ ಪಾವತಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶಿಸಿತ್ತು. ಒಟ್ಟು 12 ಕೋಟಿ ರೂಪಾಯಿಯನ್ನು ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆ ಕಚೇರಿ ನೀಡಬೇಕಿತ್ತು. ಆದರೆ ಇಲಾಖೆ ಅಧಿಕಾರಿಗಳು ಕೋರ್ಟ್ ಆದೇಶವನ್ನೂ ಗಮನಿಸದೇ ಬೇಜವಾಬ್ದಾರಿ ಮೆರೆದಿದ್ದರು. ಇದೇ ವಿಚಾರವಾಗಿ ಗುತ್ತಿಗೆದಾರ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಯಾದಗಿರಿ ಲೋಕೋಪಯೋಗಿ ಇಲಾಖೆ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಗಿದೆ.