ಯಾದಗಿರಿ: ಯಾದಗಿರಿ ಪಿಎಸ್ ಐ ಪರಶುರಾಮ್ ಅನುಮಾನಾಸೊಅದ ಸಾವು ಪ್ರಕರನದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ತನಿಖೆ ಚುರುಕುಗೊಂಡಿದೆ. ಈ ನಡುವೆ ಮೃತ ಪಿಎಸ್ಐ ಮನೆಯಲ್ಲಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಅವರ ಲೆಟರ್ ಹೆಡ್ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿಐಡಿ ಅಧಿಕಾರಿಗಳು ಪರಶುರಾಮ್ ಮನೆಯಲ್ಲಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದು, ವಸತಿ ಗೃಹದ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹೆಸರಿನ ಲೆಟರ್ ಹೆಡ್ ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ಪೋಸ್ಟಿಂಗ್ ಬೇರೆಯವರಿಗೆ ಕೊಟ್ಟ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೋಸ್ಟಿಂಗ್ ಕೊಡಿ ಎಂದು ಪರಶುರಾಮ್ ಕೇಳಿದ್ದರು. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪೋಸ್ಟಿಂಗ್ ಗಾಗಿ ಲೆಟರ್ ಹೆಡ್ ನೀಡಿದ್ದರು. ಈ ಲೆಟರ್ ಹೆಡ್ ನ್ನು ಸಿಐಡಿ ಅಧಿಕಾರಿಗಳ ಮಹಜರು ವೇಳೆ ಪತ್ತೆಯಾಗಿದ್ದು, ವಶಕ್ಕೆ ಪಡೆದಿದ್ದಾರೆ.
ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪೋಸ್ಟಿಂಗ್ ಗಾಗಿ ಶಾಸಕರು 15 ಲಕ್ಷ ರೂಪಾಯಿ ಕೇಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಪರಶುರಾಮ್ ಹಣ ಹೊಂದಿಸುತ್ತಿದ್ದರು. ವಸತಿ ಗೃಹದಲ್ಲಿ ಪೋಸ್ಟಿಂಗ್ ಗಾಗಿ ಕೂಡಿಟ್ಟಿದ್ದ 7.33 ಲಕ್ಷ ನಗದು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪರಶುರಾಮ್ ಅವರಿಗೆಸೇರಿದ ನಾಲ್ಕು ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆದು ತನಿಖೆ ನಡೆಸಿದ್ದಾರೆ.
ಪರಶುರಾಮ್ ಮೃತಪಟ್ಟ ಜಾಗದಲ್ಲಿ ಮೂಗಿನಿಂದ ಬಾಯಿಯಿಂದ ಬಂದ ರಕ್ತದ ಮಾದರಿಯನ್ನು ಸಿಐಡಿ ಸಂಗ್ರಹಿಸಿದ್ದು ತನಿಖೆ ಇನ್ನಷ್ಟು ಚುರುಕುಗೊಂಡಿದೆ.