
ಯಾದಗಿರಿ: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ನರಳಿ, ನರಳಿ ಪ್ರಾಣ ಬಿಟ್ಟಿರುವ ಘಟನೆ ಯಾದಗಿರಿ ಜಿಲ್ಲೆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ವ್ಯಕ್ತಿಯ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ಭೀಮರಾಯ (60) ವಾಂತಿ ಹಾಗೂ ಉಸಿರಾಟದ ಸಮಸೆಯಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ 2 ಗಂಟೆ ಕಳೆದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಕುಟುಂಬದವರು ಚಿಕಿತ್ಸೆ ನೀಡುವಂತೆ ಅಂಗಲಾಚಿದರೂ ವೈದ್ಯರು ನಿರ್ಲಕ್ಷ್ಯ ಮೆರೆದಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ನರಳಿ ನರಳಿ ರೋಗಿ ಕೊನೆಯುಸಿರೆಳೆದಿದ್ದಾರೆ. ವೈದ್ಯರ ನಿರ್ಲಕ್ಷಕ್ಕೆ ಭೀಮರಾಯ ಮೃತಪಟ್ಟಿದ್ದು, ಆಸ್ಪತ್ರೆಯ ಮುಂದೆ ಶವವಿಟ್ಟು ವೈದ್ಯರ ವಿರುದ್ಧ ಮೃತನ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.