ಯಾದಗಿರಿ: ಅಂಗನವಾಡಿ ಮಕ್ಕಳಿಗೆಂದು ಸರ್ಕಾರ ನೀಡುತ್ತಿರುವ ಮೊಟ್ಟೆ, ಆಹಾರ ಸಾಮಗ್ರಿಗಳನ್ನು ಅಂಗನವಾಡಿ ಕಾರ್ಯಕರ್ತೆಯರೇ ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಅಂಗನವಾಡಿ ಮಕ್ಕಳ ತಟ್ಟೆಯಲ್ಲಿ ಇಟ್ಟಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತೆ ಕಳ್ಳಾಟ ಮುಂದುವರೆಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಅಂಗನವಾಡಿಯ ದಿನಸಿ ವಸ್ತುಗಳನ್ನು ಕಾರ್ಯಕರ್ತೆ ಮನೆಗೆ ಸಾಗಿಸುತ್ತಿದ್ದ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಘಟನೆ ಬಯಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಉಮಾ, ಅಂಗನವಾಡಿಯಲ್ಲಿನ ದಿನಸಿ ಸಾಮಗ್ರಿಗಳನ್ನು ಮೂಟೆಯಲ್ಲಿ ತುಂಬಿ, ಮನೆಗೆ ಕೊಂಡೊಯ್ದಿದ್ದಾಳೆ. ಅಲ್ಲದೇ ವ್ಯಕ್ತಿಯೋರ್ವ ಬೈಕ್ ನಲ್ಲಿ ಅದೇ ದಿನಸಿ ಮೂಟೆಯನ್ನು ಕೊಂಡೊಯ್ದು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಅಂಗನವಾಡಿಯಲ್ಲಿ ದಿನಸಿ ಬಗ್ಗೆ ಅನುಮಾನಗೊಂಡ ಸ್ಥಳೀಯರು ಅಂಗನವಾಡಿ ಕಾರ್ಯಕರ್ತೆಯ ದಿನಸಿ ಕಳ್ಳಾಟವನ್ನು ಮೊಬೈಲ್ ಕ್ಯಾಮಾರಾದಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.