ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ಮಡ್ನಾಳ ಗ್ರಾಮದ ಮಂಜುಳಾ ಅವರು ಶೌಚಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ ಮಗುವಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಪತಿ ನಾಗಪ್ಪ ಅವರೊಂದಿಗೆ ಮಂಜುಳಾ ಶಹಾಪುರದ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದು, ಹೆರಿಗೆ ಸಮಯವಿದೆ ಎಂದು ವೈದ್ಯರು ಹೇಳಿದ್ದರಿಂದ ಊರಿಗೆ ವಾಪಸ್ ಆಗಿದ್ದಾರೆ. ಸಂಜೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮತ್ತೆ ಶಹಾಪುರಕ್ಕೆ ಬಂದಿದ್ದಾರೆ. ಆಸ್ಪತ್ರೆಗೆ ಹೋಗುವ ಮೊದಲು ಮಾರುಕಟ್ಟೆ ಸಮೀಪದ ಶೌಚಾಲಯಕ್ಕೆ ತೆರಳಿದ್ದು, ಅಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಶೌಚಾಲಯದಲ್ಲಿ ಕಾರ್ಯನಿರ್ವಹಿಸುವ ಕರಿಷ್ಮಾ ಅವರು ಸಮೀಪದಲ್ಲೇ ಇದ್ದ ಮಹಿಳೆಯನ್ನು ಸಹಾಯಕ್ಕೆ ಕರೆದು ಹೆರಿಗೆ ಮಾಡಿಸಿದ್ದಾರೆ. ನಂತರ ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ.