
ಆಪಲ್ ಹಿಂದಿಕ್ಕಿರುವ ಚೀನಾದ ಟೆಲಿಕಾಂ ದಿಗ್ಗಜ ಶಿಯೋಮಿ ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಉತ್ಪಾದಕನಾಗಿದೆ.
ಚೀನಾದ ಮತ್ತೊಂದು ಟೆಲಿಕಾಂ ದಿಗ್ಗಜ ಹುವಾಯ್ ಹಿನ್ನಡೆಯ ಲಾಭ ಪಡೆದ ಶಿಯೋಮಿ ಇದೀಗ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ಬಳಿಕ ಸ್ಯಾಮ್ಸಂಗ್ ಜೊತೆಗೆ ಮೊದಲ ಸ್ಥಾನಕ್ಕೆ ಪೈಪೋಟಿಯಲ್ಲಿದೆ.
ತಂತ್ರಜ್ಞಾನ ಲೋಕದ ವಿಶ್ಲೇಷಕ ಕೆನಲಿಸ್ ಪ್ರಕಾರ 2021ರ ವಿತ್ತೀಯ ವರ್ಷದ ದ್ವಿತೀಯಾರ್ಧದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದ್ದು, ಮಾರುಕಟ್ಟೆಯ 17% ಪಾಲನ್ನು ಹೊಂದಿದೆ. ಕಳೆದ ಮೂರು ತಿಂಗಳುಗಳಲ್ಲಿ ಆಕ್ರಮಣಕಾರಿ ಮಾರ್ಕೆಟಿಂಗ್‌ನಲ್ಲಿರುವ ಶಿಯೋಮಿ ತನ್ನ ಸೇಲ್ಸ್ ಅನ್ನು ಭರ್ಜರಿಯಾಗಿ ಮುಂದುವರೆಸಿದ್ದು, ಲ್ಯಾಟಿನ್ ಅಮೆರಿಕಾಗೆ ತನ್ನ ರಫ್ತನ್ನು 300 ಪ್ರತಿಶತದಷ್ಟು ಹೆಚ್ಚಿಸಿಕೊಂಡಿದೆ. ಉಳಿದಂತೆ ಆಫ್ರಿಕಾಗೆ ಮಾಡುವ ರಫ್ತಿನಲ್ಲಿ 150 ಪ್ರತಿಶತ ಹಾಗೂ ಪಶ್ಚಿಮ ಯೂರೋಪ್‌ಗೆ 50% ಪ್ರತಿಶತ ಹೆಚ್ಚಿನ ರಫ್ತುಗಳನ್ನು ಮಾಡಿದೆ ಶಿಯೋಮಿ.
ಅಗ್ರಸ್ಥಾನದಲ್ಲಿರುವ ಸ್ಯಾಮ್ಸಂಗ್ 19% ಮಾರುಕಟ್ಟೆ ಪಾಲು ಹೊಂದಿದೆ. ಇದೇ ಮೊದಲ ಬಾರಿಗೆ ಟಾಪ್ 2ಗೆ ಲಗ್ಗೆ ಇಟ್ಟಿರುವ ಶಿಯೋಮಿ ಮುಂದಿನ ದಿನಗಳಲ್ಲಿ ಸ್ಯಾಮ್ಸಂಗ್ ಅನ್ನು ಅಗ್ರ ಸ್ಥಾನದಿಂದ ಕಿತ್ತೊಗೆಯುವ ಸಾಧ್ಯತೆಗಳು ಗೋಚರಿಸಿವೆ. ಇದರ ಮಾರುಕಟ್ಟೆ ಪಾಲು ಶೇ.17 ಆಗಿದೆ.
ಆಪಲ್ ಮೂರನೇ ಸ್ಥಾನದಲ್ಲಿದ್ದು, 14 ಪ್ರತಿಶತ ಮಾರುಕಟ್ಟೆ ಪಾಲು ಹೊಂದಿದ್ದರೆ, ಒಪ್ಪೋ ಹಾಗೂ ವಿವೋ ತಲಾ 10% ಮಾರುಕಟ್ಟೆ ಪಾಲು ಹೊಂದಿವೆ.