ಶಿಯೋಮಿ ಇಂಡಿಯಾ ಕಂಪನಿಯ ಉನ್ನತಾಧಿಕಾರಿಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿರುವುದು ಭಾರೀ ಸಂಚಲನ ಸೃಷ್ಟಿಸಿದೆ.
ಜಾರಿ ನಿರ್ದೇಶನಾಲಯವು ಹೇಳುವ ರೀತಿಯಲ್ಲಿ ಹೇಳಿಕೆಗಳನ್ನು ನೀಡದಿದ್ದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿಯೋಮಿಯ ವ್ಯವಸ್ಥಾಪಕ ನಿರ್ದೇಶಕ ಮನುಕುಮಾರ್ ಜೈನ್, ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಬಿ.ಎಸ್. ರಾವ್ ಅವರಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರ್ಥಿಕ ಅಪರಾಧಗಳ ಪ್ರಕರಣವನ್ನು ಎದುರಿಸುತ್ತಿರುವ ಕಂಪನಿಯ ಅಧಿಕಾರಿಗಳು ಕಳೆದ ಏಪ್ರಿಲ್ ನಲ್ಲಿ ವಿಚಾರಣೆ ಹಾಜರಾದ ಸಂದರ್ಭದಲ್ಲಿ ಈ ಬೆದರಿಕೆ ಹಾಕಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಬೆಂಗಳೂರು ನಿವಾಸಿಗಳೇ ಗಮನಿಸಿ: ಸೋಮವಾರದಂದು ಈ ಭಾಗಗಳ ನೀರು ಪೂರೈಕೆಯಲ್ಲಿ ಆಗಲಿದೆ ವ್ಯತ್ಯಯ
ಜಾರಿ ನಿರ್ದೇಶನಾಲಯ ಹೇಳಿದ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ ನಿಮ್ಮನ್ನು ಬಂಧಿಸಲಾಗುತ್ತದೆ, ನಿಮ್ಮ ವೃತ್ತಿಗೆ ಹಾನಿ ಮಾಡಲಾಗುತ್ತದೆ, ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ವಿಚಾರಣಾಧಿಕಾರಿಗಳು ಬೆದರಿಕೆಯನ್ನು ಹಾಕಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಶಿಯೋಮಿ ಅಧಿಕಾರಿಗಳು ಈ ಒತ್ತಡವನ್ನು ಕೆಲ ಸಮಯದವರೆಗೆ ಸಹಿಸಿಕೊಂಡರು. ಆದರೆ, ಬೆದರಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಒತ್ತಾಯಪೂರ್ವಕವಾಗಿ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಶಿಯೋಮಿ ಕಂಪನಿಯು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಜಾರಿ ನಿರ್ದೇಶನಾಲಯವು ಭಾರತದಲ್ಲಿನ ಬ್ಯಾಂಕುಗಳಲ್ಲಿ ಕಂಪನಿಗೆ ಸೇರಿದ 5551.27 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿತ್ತು. ಇದಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.