ವುಹಾನ್: ಚೀನಾದ ವುಹಾನ್ ನಲ್ಲಿ ಕೋವಿಡ್-19 ಮೊದಲ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಿಗೆ ಎರಡು ವರ್ಷಗಳ ನಂತರವೂ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ.
ಸತತ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಜನರನ್ನು ಪೀಡಿಸಿದ್ದ ಕೊರೋನಾ ವೈರಸ್ ಈಗಲೂ ಜನರನ್ನು ಬಾಧಿಸುತ್ತಲೇ ಇದೆ. ಈ ಹಿಂದೆ ಕೋವಿಡ್-19 ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳು ಇದುವರೆಗೆ ಅದರ ಅಡ್ಡಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಹೌದು, ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ಅರ್ಧದಷ್ಟು ಮಂದಿ ನಿದ್ರಾಹೀನತೆ ಮತ್ತು ಆಯಾಸದಿಂದ ಬಳಲುತ್ತಿದ್ದಾರೆ ಎಂದು ವುಹಾನ್ ನ ಅಧ್ಯಯನ ಕೇಂದ್ರ ತಿಳಿಸಿದೆ. ಸಾಮಾನ್ಯ ಜನರಿಗೆ ಹೋಲಿಸಿದರೆ ಅವರ ಆರೋಗ್ಯ ಹದಗೆಟ್ಟಿದೆ. ಹೆಚ್ಚಿನ ಆರೈಕೆಯ ಅಗತ್ಯತೆ ಇದೆ ಎಂದು ದಿ ಲ್ಯಾನ್ಸೆಟ್ ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಲಕ್ಷಾಂತರ ಮಂದಿಯಲ್ಲಿ ಮಕ್ಕಳು, ಹದಿಹರೆಯದವರು ಹೀಗೆ ಎಲ್ಲಾ ವರ್ಗಗಳ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿರುವುದರಿಂದ ಇದರ ನಿವಾರಣೆಗೆ ಸಂಶೋಧನೆಯ ಅಗತ್ಯತೆ ಇದೆ.
2020 ರ ಆರಂಭದಲ್ಲಿ ವುಹಾನ್‌ನ ಜಿನ್ ಯಿನ್-ಟಾನ್ ಆಸ್ಪತ್ರೆಯಲ್ಲಿ ಕೋವಿಡ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 1,192 ಜನರನ್ನು ವಿಜ್ಞಾನಿಗಳು ಅಧ್ಯಯನಕ್ಕೊಳಪಡಿಸಿದರು. ಅವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡ ತರುವಾಯದ ಆರು ತಿಂಗಳುಗಳು, 12 ತಿಂಗಳುಗಳು ಮತ್ತು ಎರಡು ವರ್ಷಗಳ ನಂತರ ಅವರನ್ನು ಪರೀಕ್ಷಿಸಿದರು. ಸರಾಸರಿ 57 ವರ್ಷ, ಅಥವಾ ಅದಕ್ಕಿಂತ ಕೊಂಚ ಹೆಚ್ಚಿನ ವಯಸ್ಸಿನ ಮಂದಿಯ ಮೇಲೆ ಅಧ್ಯಯನ ನಡೆಸಲಾಯಿತು. ಆರು ನಿಮಿಷಗಳ ಕಾಲ ಮೌಲ್ಯಮಾಪನಕ್ಕೊಳಪಡಿಸಲಾಯಿತು. ತದನಂತರ ಮಾನಸಿಕ ಆರೋಗ್ಯ, ಜೀವನದ ಗುಣಮಟ್ಟ ಇತರೆ ಪ್ರಶ್ನೆಗಳಿಗೆ ಉತ್ತರಿಸಿದರು.
ಆರು ತಿಂಗಳ ನಂತರ, ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 68% ಮಂದಿಗೆ ಕೋವಿಡ್ ನ ಕನಿಷ್ಠ ಒಂದು ರೋಗಲಕ್ಷಣ ಕಂಡು ಬಂದಿದೆ. ತದನಂತರ ಇದು ಶೇ 55ಕ್ಕೆ ಕುಸಿದಿದೆ. ಇಂತಹ ರೋಗಿಗಳನ್ನು ವರ್ಷಕ್ಕೊಮ್ಮೆಯಾದರೂ ಪರೀಕ್ಷಿಸಲು ವಿಜ್ಞಾನಿಗಳು ಇಚ್ಛಿಸಿದ್ದಾರೆ.