ವಿಧಾನಸಭಾ ಚುನಾವಣೆಯಲ್ಲಿ ತಾವು ನೀಡಿದ್ದ ಭರವಸೆಯಂತೆ ‘ಗ್ಯಾರಂಟಿ’ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿದ ಕಾರಣ ಇದು ವರ್ಕೌಟ್ ಆಗಿ ಲೋಕಸಭಾ ಚುನಾವಣೆಯಲ್ಲಿ 15 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಕೇವಲ 9 ಸ್ಥಾನ ಗಳಿಸುವಲ್ಲಿ ಮಾತ್ರ ಸಫಲವಾಗಿದೆ.
ಇನ್ನು ಈ ಬಾರಿಯ ಕಾಂಗ್ರೆಸ್ ಸೋಲಿನ ಕುರಿತಂತೆ ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ್ದು ಹಾಗೂ ಹಣವಿದ್ದವರಿಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ನವ ದೆಹಲಿಗೆ ಆಗಮಿಸಿರುವ ಅವರು ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಹಣವಿದ್ದ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅಲ್ಲದೆ ಗ್ಯಾರಂಟಿ ಯೋಜನೆಗಳು ತಮಗೆ ಮತ ಗಳಿಸಿ ಕೊಡಬಹುದೆಂಬ ಅತಿಯಾದ ಆತ್ಮ ವಿಶ್ವಾಸವೂ ಪಕ್ಷದ ಅಭ್ಯರ್ಥಿಗಳು ಸೋಲಲು ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಹೇಳಿದ ವೀರಪ್ಪ ಮೊಯ್ಲಿ, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಹಾಕಿದರೆ ಗೆಲುವು ಸಾಧಿಸಬಹುದು. ಈ ನಿಟ್ಟಿನಲ್ಲಿ ಪಕ್ಷದ ಉನ್ನತ ನಾಯಕರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.