ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹಾಗೂ 1800 ದಶಕದಲ್ಲಿ ಜನಿಸಿ ಇನ್ನೂ ಜೀವಂತವಾಗಿದ್ದ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್ನಲ್ಲಿ ನಿಧನರಾಗಿದ್ದಾರೆ. ಇವರು 1897ರ ಸೆಪ್ಟೆಂಬರ್ 11ರಂದು ಜನಿಸಿದ್ದರು. ನವೆಂಬರ್ 22ರಂದು ಫ್ರಾನ್ಸಿಸ್ಕಾ ಇಹಲೋಕ ತ್ಯಜಿಸಿದ್ದಾರೆ. ಫ್ರಾನ್ಸಿಸ್ಕಾ ನಿಧನವನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ನಮ್ಮ ಪ್ರೀತಿಯ ಲೋಲಾ ಫ್ರಾನ್ಸಿಸ್ಕಾ ಸುಸಾನೋ ಸೋಮವಾರ ಸಂಜೆ ನಿಧನರಾದರು ಎಂಬ ಸುದ್ದಿಯನ್ನು ತಿಳಿಸಲು ವಿಷಾದವೆನಿಸುತ್ತಿದೆ. ಗಿನ್ನೆಸ್ ವಿಶ್ವ ದಾಖಲೆಯ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ಬರೆದಿದ್ದ ಇವರಿಗೆ 124 ವರ್ಷ ವಯಸ್ಸಾಗಿತ್ತು ಎಂದು ಅಲ್ಲಿನ ಸರ್ಕಾರವು ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಫ್ರಾನ್ಸಿಸ್ಕಾ 1897ರ ಸಪ್ಟೆಂಬರ್ 11ರಂದು ಜನಿಸಿದರೆಂದು ದಾಖಲೆಗಳು ಮಾಹಿತಿ ನೀಡುತ್ತಿವೆ. ಸ್ಪ್ಯಾನಿಷ್ ಫಿಲಿಪೈನ್ಸ್ ಆಳ್ವಿಕೆಯನ್ನು ತ್ಯಜಿಸುವ ಒಂದು ವರ್ಷದ ಮೊದಲು ಇವರು ಜನಿಸಿದ್ದಾರೆ. ಇಷ್ಟೊಂದು ಸುದೀರ್ಘ ಆಯುಷ್ಯದ ರಹಸ್ಯವೇನು ಅಂತಾ ಕೇಳಿದ್ರೆ ಫ್ರಾನ್ಸಿಸ್ಕಾ ತರಕಾರಿಯುಕ್ತ ಆಹಾರ ಸೇವನೆ ಎಂದು ಹೇಳುತ್ತಿದ್ದರು. ಫ್ರಾನ್ಸಿಸ್ಕಾ ಕಡಿಮೆ ಮಾಂಸ ಸೇವಿಸುತ್ತಿದ್ದರು ಅದರಲ್ಲೂ ಹಂದಿಮಾಂಸವನ್ನು ಮುಟ್ಟುತ್ತಲೂ ಇರಲಿಲ್ಲ. ಮದ್ಯಪಾನ ಕೂಡ ಸೇವನೆ ಮಾಡದೇ ಇರೋದು ಫ್ರಾನ್ಸಿಸ್ಕಾ ಆಯಸ್ಸಿನ ಗುಟ್ಟಾಗಿದೆ.