‘ವಿಶ್ವದ ಅತ್ಯಂತ ಪ್ಲೆಕ್ಸಿಬಲ್ ಹುಡುಗಿ’ ಎಂದು ಕರೆಯಲ್ಪಡುವ 14 ವರ್ಷದ ಜಿಮ್ನಾಸ್ಟ್ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಲಿಬರ್ಟಿ ಬ್ಯಾರೋಸ್ 30 ಸೆಕೆಂಡುಗಳಲ್ಲಿ ಎದೆಯಿಂದ ನೆಲಕ್ಕೆ ಬೆನ್ನು ಬಾಗಿದ ದಾಖಲೆಯನ್ನು ಸ್ಥಾಪಿಸಿದರು.
ಯುಕೆಯ ಪೀಟರ್‌ಬರೋದಲ್ಲಿ ವಾಸಿಸುವ ಲಿಬರ್ಟಿ, ಅಕ್ಟೋಬರ್ 5ರಂದು ಈ ಸಾಧನೆ ಮಾಡಿದ್ದು, ಅರ್ಧ ನಿಮಿಷದಲ್ಲಿ 11 ಬಾರಿ ತನ್ನ ಕಾಲುಗಳನ್ನು ತಲೆಯ ಭಾಗದಿಂದ ಮಡಚಿ ಮುಂಭಾಗಕ್ಕೆ ಎದೆಯ ಬಳಿ ತಂದು ನೆಲಕ್ಕೆ ತಾಗಿಸಿ ದೇಹವನ್ನು ಯಶಸ್ವಿಯಾಗಿ ಹಿಂದಕ್ಕೆ ಬಾಗಿಸಿದರು.
ನಾನು ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವವಳು ಎಂದು ಹೇಳಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಇದೊಂದು ಅದ್ಭುತ ಸಾಧನೆ. ಇದು ನನ್ನ ಜೀವನವನ್ನು ಬದಲಾಯಿಸಿದೆ, ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಲಿಬರ್ಟಿ ಈಗಾಗಲೇ ತನ್ನ ಯೂಟ್ಯೂಬ್ ವೀಡಿಯೊಗಳಿಗಾಗಿ ಸಾಕಷ್ಟು ಜನಪ್ರಿಯವಾಗಿದ್ದಾರೆ. ಅವರು ಸ್ಪೇನ್‌ನ ಗಾಟ್ ಟ್ಯಾಲೆಂಟ್‌ನಲ್ಲಿ ಸ್ಪರ್ಧಿ ಕೂಡ ಆಗಿದ್ದಾರೆ. ನಾನು ಆಕ್ಷನ್ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಅದು ನನ್ನ ಕನಸು. ಸ್ವಂತ ಶಾಲೆಯನ್ನು ಆರಂಭಿಸಲು ಬಯಸುತ್ತೇನೆ ಅಲ್ಲಿ ಜನರಿಗೆ ನೃತ್ಯ ಮಾಡುವುದು ಮತ್ತು ಮೂವ್ ಮೆಂಟ್ ಹೇಗೆ ಮಾಡುವುದೆಂದು ಕಲಿಸಬಹುದು ಎಂದು ಅವರು ಹೇಳಿದ್ದಾರೆ.