ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸ್ತಾರೆ. ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಎಂಬ ಕನಸು ಕೂಡ ಸಹಜ. ಆದರೆ ಜಗತ್ತಿನ ಕೆಲವು ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಆಗುವುದು ಅತ್ಯಂತ ಅಪಾಯಕಾರಿ. ಏಕೆಂದರೆ ಅಲ್ಲಿಂದ ವಿಮಾನವನ್ನು ಹಾರಿಸುವುದು ಕೂಡ ಬಹುದೊಡ್ಡ ಸವಾಲು. ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳ ಬಗ್ಗೆ ತಿಳಿಯೋಣ.
ಪಾರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭೂತಾನ್
ಸಮುದ್ರ ಮಟ್ಟದಿಂದ 7,364 ಅಡಿ ಎತ್ತರದಲ್ಲಿ, ಹಿಮಾಲಯದ ನಡುವೆ ಇರುವ ಭೂತಾನ್ ದೇಶದ ಏಕೈಕ ವಿಮಾನ ನಿಲ್ದಾಣ ಇದು. ಕೇವಲ 17 ಪೈಲಟ್‌ಗಳಿಗೆ ಮಾತ್ರ ಇಲ್ಲಿ ಇಳಿಯಲು ಅವಕಾಶ ನೀಡಲಾಗಿದೆ.ಅದರರ್ಥ ನುರಿತ ಪೈಲಟ್‌ಗಳು ಮಾತ್ರ ಇಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸುತ್ತಾರೆ. ಇಲ್ಲಿ ವಿಮಾನ ಹಗಲಿನಲ್ಲಿ ಮಾತ್ರ ಲ್ಯಾಂಡ್ ಆಗಬಹುದು, ಟೇಕ್ ಆಫ್ ಮಾಡಬಹುದು. ಏಕೆಂದರೆ ರಾತ್ರಿ ವಿಮಾನವು ಯಾವುದೇ ಪರ್ವತಕ್ಕೆ ಅಪ್ಪಳಿಸುವ ಅಪಾಯವಿರುತ್ತದೆ.
ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಠ್ಮಂಡು
ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ವಿಶ್ವದ ಅತ್ಯಂತ ಅಪಾಯಕಾರಿ ಏರ್‌ಪೋರ್ಟ್ ಎನಿಸಿಕೊಂಡಿದೆ. 1949 ರಲ್ಲಿ ಇಲ್ಲಿಂದ ಮೊದಲ ಬಾರಿಗೆ ವಿಮಾನ ಹಾರಿಸಲಾಯ್ತು. ಅಂದಿನಿಂದ ಇಲ್ಲಿ ಸುಮಾರು 18 ವಿಮಾನ ಅಪಘಾತಗಳು ಸಂಭವಿಸಿವೆ, ಅವುಗಳಲ್ಲಿ ಹಲವು ಮಾರಣಾಂತಿಕವಾಗಿದ್ದವು.
ಪ್ರಿನ್ಸೆಸ್ ಜೂಲಿಯಾನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸೇಂಟ್ ಮಾರ್ಟೆನ್
ಸೇಂಟ್ ಮಾರ್ಟೆನ್ ಕೆರಿಬಿಯನ್ ದ್ವೀಪವಾಗಿದ್ದು, ಇಲ್ಲಿ ವಿಮಾನ ನಿಲ್ದಾಣದ ರನ್‌ವೇ ಕೇವಲ 7,100 ಅಡಿ ಉದ್ದವಾಗಿದೆ. ಒಂದು ಕಡೆ ಸಮುದ್ರ ತೀರ, ಇನ್ನೊಂದು ಕಡೆ ಪರ್ವತಗಳು. ಇಲ್ಲಿ ಅನೇಕ ಜನರು ವಿಮಾನದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. 2017 ರಲ್ಲಿ ವಿಮಾನ ನಿಲ್ದಾಣದ ಬೇಲಿಯಲ್ಲಿ ಮಹಿಳೆಯೊಬ್ಬರು ನಿಂತಿದ್ದರು, ಆಗ ವಿಮಾನವು ಆಕೆಯ ತಲೆಗೆ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದರು.
ಮಡೈರಾ ವಿಮಾನ ನಿಲ್ದಾಣ
ಪೋರ್ಚುಗಲ್‌ನ ಸಾಂಟಾ ಕ್ರೂಜ್‌ನಲ್ಲಿರುವ ಈ ವಿಮಾನ ನಿಲ್ದಾಣವನ್ನು ಕ್ರಿಸ್ಟಿಯಾನೋ ರೊನಾಲ್ಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. ಇದರ ಏರ್‌ಸ್ಟ್ರಿಪ್ ಸಾಕಷ್ಟು ಚಿಕ್ಕದಾಗಿದೆ, ಇದನ್ನು ಸಮುದ್ರ ಮತ್ತು ಪರ್ವತ ಬಂಡೆಯ ನಡುವೆ ಇರಿಸಲಾಗಿದೆ. ಇಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡುವುದು ಸವಾಲೇ ಸರಿ. ಅಟ್ಲಾಂಟಿಕ್ ಸಾಗರದಿಂದ ಬರುವ ಬಲವಾದ ಗಾಳಿ ಕೂಡ ಇಲ್ಲಿ ಪ್ರಕ್ಷುಬ್ಧತೆಯ ಅಪಾಯವನ್ನು ಹೆಚ್ಚಿಸುತ್ತದೆ.
ಜಿಬ್ರಾಲ್ಟರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಜಿಬ್ರಾಲ್ಟರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ವಿಶಿಷ್ಟ ಮತ್ತು ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರ ರನ್‌ವೇ ನಗರದ ಮಧ್ಯದಲ್ಲಿ ಹಾದು ಹೋಗುತ್ತದೆ. ವಿಮಾನ ಟೇಕಾಫ್ ಮತ್ತು ಲ್ಯಾಂಡ್ ಆಗುವಾಗ ರಸ್ತೆಯಲ್ಲಿ ಕೆಲಕಾಲ ವಾಹನ ಮತ್ತು ಜನಸಂಚಾರ ನಿಲ್ಲಿಸಬೇಕಾಗುತ್ತದೆ.