ನ್ಯೂಯಾರ್ಕ್: ಜೈವಿಕವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಡೇವಿಡ್ ಬೆನೆಟ್ ಸೀನಿಯರ್ ಇತ್ತೀಚೆಗೆ ಸಾವನ್ನಪ್ಪಿದ್ದರು.
ಹಂದಿಯ ಹೃದಯದಲ್ಲಿ ಇದ್ದ ಪಾರ್ಸಿನ್ ವೈರಸ್ ನಿಂದಲೇ ಅವರು ಸತ್ತಿರಬೇಕೆಂದು ಮಸ್ಸಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿಜ್ಞಾನಿಗಳು ಶಂಕಿಸಿದ್ದಾರೆ.
ಜನವರಿ 7ರಂದು ಡಾ. ಮೊಹಮ್ಮದ್ ಮೋಹಿಯುದ್ದೀನ್ ಅವರ ಸಹ -ನೇತೃತ್ವದಲ್ಲಿ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ತಂಡವು ಹೃದಯದ ಕಸಿಯನ್ನು ನಿರ್ವಹಿಸಿತ್ತು. ಆಗ ಬೆನ್ನೆಟ್ ದುರ್ಬಲ ಸ್ಥಿತಿಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಅವರು ಬಿಗ್ ಸೈಟೋಮೆಗಾಲೋ ವೈರಸ್ ಅಥವಾ ಸಿಎಂವಿ ಎಂದು ಕರೆಯಲಾಗುವ ಸೋಂಕಿಗೆ ತುತ್ತಾಗಿರಬೇಕೆಂದು ಅಂದಾಜಿಸಲಾಗಿದೆ. ಅವರ ಸಾವಿಗೆ ಹಲವು ಕಾರಣಗಳು ಜೊತೆಗೆ ಇದು ಒಂದು ಕಾರಣ ಎಂದು ಅಂದಾಜಿಸಲಾಗಿದೆ. ಜೀವ ಉಳಿಸುವ ಕೊನೆಯ ಪ್ರಯತ್ನವಾಗಿ ಹಂದಿಯ ಹೃದಯವನ್ನು ಸ್ವೀಕರಿಸಿದ ಎರಡು ತಿಂಗಳ ಬಳಿಕ ಬೇನೆಟ್ ತೀರಿಕೊಂಡರು.
ಕಸಿ ಮಾಡಲಾದ ಹೃದಯವು ರಕ್ತವನ್ನು ಚೆನ್ನಾಗಿ ಪಂಪ್ ಮಾಡುತ್ತಿತ್ತು ಕೆಲವು ಅಂಗಾಂಶಗಳೂ ಬೆಳೆಯುತ್ತಿದ್ದು, ಹೃದಯ ಸಾಕಷ್ಟು ಪ್ರಮಾಣದಲ್ಲಿ ಹಿಗ್ಗಲು ಹಾಗೂ ರಕ್ತವನ್ನು ಪಂಪ್ ಮಾಡಿದ ಬಳಿಕ ಹೃದಯವನ್ನು ವಿಶ್ರಾಂತ ಸ್ಥಿತಿಗೆ ತರಲು ಅಡ್ಡಿಯಾಗಿತ್ತು.
ಇನ್ನು ಕೆಲವು ವೈರಸ್ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡಲಾಗಿದ್ದರೂ ಬೆನೆಟ್ ಅವರ ಸಾವಿಗೆ ನಿರ್ದಿಷ್ಟ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಅವರ ಸಾವು ಮುಂದಿನ ಸಂಶೋಧನೆಗಳಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸಲಿದೆ. ಭವಿಷ್ಯದಲ್ಲಿ ಇಂತಹ ಅಪಾಯಗಳನ್ನು ನಿವಾರಿಸಲು ಈ ಪ್ರಕರಣವು ನೆರವಾಗಲಿದೆ ಎಂದು ಡಾಕ್ಟರ್ ಮೊಹಮ್ಮದ್ ತಿಳಿಸಿದ್ದಾರೆ.