ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ವಿಷಯದಲ್ಲಿ ನಾವು ಎಷ್ಟು ದೂರ ಬಂದಿದ್ದೇವೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯ ಅವಲೋಕನ ಮಾಡಿದರೆ ಬಹಳ ಹೆಮ್ಮೆಯ ಜತೆಗೆ ಅಷ್ಟೇ ಅಚ್ಚರಿಯೂ ಆಗುತ್ತದೆ. ಇದೀಗ ಅಚ್ಚರಿ ಎನ್ನುವಂಥ ಇನ್ನೊಂದು ಹೊಸ ಸಂಶೋಧನೆ ನಡೆದಿದೆ.
ಜಿಐ ಜೋ ಎಂಬ ಚಲನಚಿತ್ರದಲ್ಲಿ ನಾಯಕ ಧರಿಸಿರುವ ಶೂಸ್ನಿಂದಾಗಿ ಆತ 10 ಪಟ್ಟು ವೇಗವಾಗಿ ಸಂಚರಿಸುತ್ತಿದ್ದುದನ್ನು ಚಿತ್ರೀಕರಿಸಲಾಗಿದೆ. ಆದರೆ ಇದು ಕನಸಿನ ಮಾತು, ನಿಜ ಜೀವನದಲ್ಲಿ ಸಾಧ್ಯವಿಲ್ಲ, ಚಿತ್ರಗಳಲ್ಲಿ ಮಾತ್ರ ಸಾಧ್ಯ ಎಂದುಕೊಂಡವರೇ ಹೆಚ್ಚು. ಆದರೆ ಈ ಕನಸೀಗ ನನಸಾಗಿದೆ.
ಶಿಫ್ಟ್ ರೋಬೋಟಿಕ್ ಹೆಸರಿನ ಪಿಟ್ಸ್‌ಬರ್ಗ್ ಮೂಲದ ಕಂಪೆನಿಯು ಬ್ಯಾಟರಿ ಚಾಲಿತ ಕೃತಕ ಬುದ್ಧಿಮತ್ತೆ (ಎಐ) ಶೂಸ್ ತಯಾರಿಸಿದೆ. ಇದು ನಿಮ್ಮ ಸಾಮಾನ್ಯ ವೇಗಕ್ಕಿಂತ ವೇಗವಾಗಿ ನಡೆಯುವಂತೆ ಮಾಡುತ್ತದೆ. ವಾಸ್ತವವಾಗಿ, ಈ ಶೂಸ್ಗಳು ನಿಮ್ಮ ವೇಗವನ್ನು 250 ಪ್ರತಿಶತದಷ್ಟು ಹೆಚ್ಚಿಸಬಹುದು ಎಂದು ಕಂಪೆನಿ ಹೇಳಿದೆ. ಈ ಮೂಲಕ ಈ ಶೂಸ್ ಅನ್ನು ವಿಶ್ವದ ಅತ್ಯಂತ ವೇಗದ ಶೂಸ್ ಎನ್ನಲಾಗುತ್ತಿದೆ.
ಈ ಶೂಸ್ಗೆ ಕಂಪೆನಿಯು ‘ಮೂನ್‌ವಾಕರ್ಸ್’ ಎಂದು ಹೆಸರಿಸಿದೆ. ಈ ಮೂನ್‌ವಾಕರ್‌ಗಳು ಯಾವುದೇ ಸಾಮಾನ್ಯ ರೋಲರ್-ಸ್ಕೇಟಿಂಗ್ ಬೂಟುಗಳಂತೆ ಕಾಣುತ್ತವೆ, ಆದರೆ ಅವುಗಳಲ್ಲಿರುವ ಮೋಟಾರೀಕೃತ ಚಕ್ರಗಳು ವೇಗವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಸಾಮಾನ್ಯ ವಾಕಿಂಗ್ ವೇಗವು 2.5-4 m / h ಆಗಿದ್ದರೆ, ಶೂಗಳು ಅದನ್ನು 7 m / h ನಿಂದ 11 km / h ಗೆ ಹೆಚ್ಚಿಸಬಹುದು. ಇದರ ವಿಡಿಯೋ ವೈರಲ್ ಆಗಿದೆ.