ಮುಂದುವರೆದ ಜಗತ್ತು ಹಾಗೂ ಅಭಿವೃದ್ಧಿಶೀಲ ಜಗತ್ತುಗಳ ಮೀನುಗಾರಿಕೆ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಟ್ಯೂನಾ ಮೀನಿಗೆ ಜಗತ್ತಿನಾದ್ಯಂತ ಭಯಂಕರ ಬೇಡಿಕೆ ಇದೆ. ಪ್ರತಿ ವರ್ಷ ಸರಾಸರಿ 7 ದಶಲಕ್ಷ ಟನ್‌ಗಳಷ್ಟು ಟ್ಯೂನಾ ಹಾಗೂ ಸಂಬಂಧಿತ ಮೀನುಗಳ ರಾಶಿ ಬಂದರುಗಳಿಗೆ ಬರುತ್ತದೆ.
ಸಮುದ್ರ ಆಹಾರ ಪ್ರಿಯರ ಅಚ್ಚುಮೆಚ್ಚಿನ ಟ್ಯೂನಾ ಮೀನುಗಳು ತಮ್ಮಲ್ಲಿರುವ ಹೇರಳ ಪೋಷಕಾಂಶಗಳಿಂದಾಗಿ ಎಂದೆಂದಿಗೂ ಬೇಡಿಕೆಯಲ್ಲಿವೆ. ಮೇ 2 ಅನ್ನು ವಿಶ್ವ ಟ್ಯೂನಾ ದಿನಾಚರಣೆ ಎಂದು 2017ರಿಂದ ಅಧಿಕೃತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಡಿಸೆಂಬರ್ 2016ರಂದು, ತನ್ನ ಸುತ್ತೋಲೆ 71/124ರ ಮೂಲಕ ಮೇ 2ರಂದು ವಿಶ್ವ ಟ್ಯೂನಾ ದಿನಾಚರಣೆ ಎಂದು ಘೋಷಿಸಲು ವಿಶ್ವ ಸಂಸ್ಥೆ ಮಹಾ ಸಭೆ ಅಧಿಕೃತವಾಗಿ ನಿರ್ಧರಿಸಿದೆ. ಈ ಮೂಲಕ ಟ್ಯೂನಾ ಸಂತತಿಯ ಸಂರಕ್ಷಣೆ ಹಾಗು ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ವಿಶ್ವಾದ್ಯಂತ 96 ದೇಶಗಳು ವಿಶೇಷ ಕಾರ್ಯಕ್ರಮಗಳನ್ನು ಕೈಗೊಂಡಿವೆ.
ಸಮುದ್ರದಲ್ಲಿ ಸಿಗುವ ದೊಡ್ಡ ಮೀನುಗಳಲ್ಲಿ ಒಂದಾಗಿರುವ ಟ್ಯೂನಾದ ಅಟ್ಲಾಂಟಿಕ್ ಬ್ಲೂಫಿನ್ ಅವತಾರಿಯು 2000 ಪೌಂಡ್‌ಗಳಷ್ಟು ತೂಗಬಲ್ಲದು. ತನ್ನ ದೇಹ ರಚನೆಯನ್ನು ಸಮರ್ಪಕವಾಗಿ ಬಳಸಿಕೊಂಡು ತೀರದ ನೀರು ಹಾಗೂ 3,000 ಅಡಿ ಆಳದಲ್ಲೂ ಸಹ ಟ್ಯೂನಾ ಸಲೀಸಾಗಿ ಈಜಾಡಬಲ್ಲದು. ಗಂಟೆಗೆ 43 ಮೈಲಿಯಷ್ಟು ವೇಗದಲ್ಲಿ ಟ್ಯೂನಾ ಈಜಬಲ್ಲದಾಗಿದೆ. ಸಾಮಾನ್ಯವಾಗಿ 15-30 ವರ್ಷಗಳ ಕಾಲ ಟ್ಯೂನಾ ಬದುಕಬಲ್ಲದು.
ಅಟ್ಲಾಂಟಿಕ್, ಪೆಸಿಫಿಕ್, ಹಿಂದೂ ಮಹಾಸಾಗರ ಹಾಗೂ ಮೆಡಿಟರೇನಿಯನ್ ಸಾಗರಗಳಲ್ಲಿ 40ಕ್ಕೂ ಹೆಚ್ಚಿನ ಬಗೆಯ ಟ್ಯೂನಾ ಮೀನುಗಳು ವಾಸಿಸುತ್ತಿವೆ. ಶಾರ್ಕ್‌ಗಳಿಂದ ರಕ್ಷಣೆಗಾಗಿ ಟ್ಯೂನಾಗಳು ಡಾಲ್ಪಿನ್ ಜೊತೆಗೆ ಬೆರೆಯುತ್ತವೆ. ಬಿಸಿ ರಕ್ತದ ಈ ಜೀವಿಗಳು ನೀರಿನಿಂದ ಎತ್ತರಕ್ಕೆ ಚಿಮ್ಮಬಲ್ಲವು.
ಭಾರೀ ಬೇಡಿಕೆ ಕಾರಣ ಟ್ಯೂನಾ ಮೀನುಗಳ ಮೀನುಗಾರಿಕಾ ಚಟುವಟಿಕೆಗಳು ವಿಪರೀತವಾಗಿದೆ. ಈ ಕಾರಣಕ್ಕಾಗಿ ಟ್ಯೂನಾ ಮೀನುಗಾರಿಕೆಯ ಮೇಲೆ ಮಿತಿ ಹೇರುವ ಸಂಬಂಧ ದೇಶಗಳು ಕಟ್ಟುನಿಟ್ಟಿನ ನೀತಿ ರೂಪಿಸಿಕೊಂಡಿವೆ.