ಪ್ರತಿ ವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನವೆಂದು ಆಚರಿಸಲಾಗುತ್ತದೆ. ಜಗತ್ತಿನ ಮೊದಲ ಟಿವಿ ಫೋರಂ ಅನ್ನು 1996ರಲ್ಲಿ ಈ ದಿನದಂದು ಆಯೋಜಿಸಲಾಗಿದ್ದನ್ನು ಈ ಆಚರಣೆ ಮೂಲಕ ಸ್ಮರಿಸಲಾಗುತ್ತದೆ.
“ನವೆಂಬರ್ 21 ಮತ್ತು 22, 1996ರಲ್ಲಿ ವಿಶ್ವ ಸಂಸ್ಥೆಯಲ್ಲಿ ಮೊದಲ ವಿಶ್ವ ಟಿವಿ ಫೋರಂ ಅನ್ನು ಆಯೋಜಿಸಲಾಗಿತ್ತು. ಆ ವೇಳೆ ಮಾಧ್ಯಮಗಳ ಮುಂಚೂಣಿ ವ್ಯಕ್ತಿಗಳು ಬದಲಾಗುತ್ತಿರುವ ಜಗತ್ತಿನಲ್ಲಿ ದೂರದರ್ಶನದ ಮಹತ್ವ ಹಾಗೂ ಈ ಸಾಧನದಿಂದ ಪರಸ್ಪರ ಸಹಕಾರವನ್ನು ಹೇಗೆ ವರ್ಧಿಸಬಹುದು ಎಂದು ಚರ್ಚಿಸಲು ನೆರೆದಿದ್ದರು.
ಇದಕ್ಕಾಗಿಯೇ ಸಾಮಾನ್ಯ ಸಭೆಯಲ್ಲಿ 21 ನವೆಂಬರ್ ಅನ್ನು ʼವಿಶ್ವ ದೂರದರ್ಶನ ದಿನʼ ವೆಂದು ಘೋಷಿಸಲು ನಿರ್ಧರಿಸಿತು.
ಇಂದಿನ ದಿನಮಾನದಲ್ಲಿ ಅಂತರ್ಜಾಲದ ಮೂಲಕ ವಿಡಿಯೋ ಸ್ಟ್ರೀಮಿಂಗ್ ಮಾಡುವ ಟ್ರೆಂಡ್ ಜೋರಾಗಿಯೇ ಇದ್ದರೂ ಸಹ ವಿಡಿಯೋ ಮೂಲಕ ಮಾಹಿತಿ ಸ್ವೀಕರಿಸುವುದೇನೋ ಕಡಿಮೆಯಾಗಿಲ್ಲ. ವಿಶ್ವಾದ್ಯಂತ ಟಿವಿ ಸೆಟ್ಗಳನ್ನು ಹೊಂದುವ ಮನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ವಿಶ್ವ ದೂರದರ್ಶನ ದಿನದಂದು ಹೊರಜಗತ್ತಿನೊಂದಿಗೆ ನಮ್ಮನ್ನು ಸಂಪರ್ಕಿಸಲು ಶ್ರಮಿಸುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವ ಪರಿಪಾಠ ಈ ದಿನದ ಬಗ್ಗೆ ಅರಿತ ಮಂದಿಯಲ್ಲಿ ನಡೆದುಕೊಂಡು ಬಂದಿದೆ.
ಇನ್ನು ಭಾರತದ ದೂರದರ್ಶನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಸೆಪ್ಟೆಂಬರ್ 15, 1959ರಲ್ಲಿ ಆರಂಭಗೊಂಡ ದೂರದರ್ಶನ, 20ನೇ ಶತಮಾನದ ದ್ವಿತೀಯಾರ್ಧದಲ್ಲಿ ದೇಶವಾಸಿಗಳ ಮನರಂಜನೆ ಹಾಗೂ ಸುದ್ದಿ ಮಾಹಿತಿಯ ಏಕೈಕ ಮೂಲವಾಗಿ ದಶಕಗಳನ್ನು ಹಾದು ಬಂದಿದೆ.
ಇತರೆ ಯಾವುದೇ ಚಾನೆಲ್ ಗಳು ಇರದಿದ್ದ ಕಾಲದಲ್ಲಿ ಮಹಾಭಾರತ, ರಾಮಾಯಣ, ಚಿತ್ರಹಾರ್, ಮಾಲ್ಗುಡಿ ಡೇಸ್ನಂಥ ಚಿರಸ್ಮರಣೀಯ ಪ್ರದರ್ಶನಗಳಿಂದಾಗಿ ದೂರದರ್ಶನ ವಾಹಿನಿ ನಮ್ಮೆಲ್ಲರ ಜೀವನದ ಒಂದು ಭಾಗವೇ ಆಗಿಬಿಟ್ಟಿತ್ತು.
ಈಗಲೂ ತನ್ನದೇ ಆದ ಘನತೆ ಇಟ್ಟುಕೊಂಡಿರುವ ದೂರದರ್ಶನ ಹೊಸ ಹೊಸ ಪ್ರಯೋಗ ಮಾಡುತ್ತಲಿದ್ದು, ಪ್ರಾದೇಶಿಕತೆಗೂ ಒತ್ತುಕೊಟ್ಟಿರುವುದು ವಿಶೇಷ.