ಬೆಂಗಳೂರು : ವಿಶ್ವ ರೇಬೀಸ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ಆಚರಿಸಲಾಗುತ್ತದೆ, ಇದು ಲೂಯಿಸ್ ಪಾಶ್ಚರ್ ಅವರ ಮರಣದ ವಾರ್ಷಿಕೋತ್ಸವವಾಗಿದೆ. ಅವರು ರೇಬೀಸ್ ಲಸಿಕೆಯನ್ನು ಸಿದ್ಧಪಡಿಸಿದ ವಿಜ್ಞಾನಿ. ಮಾನವರು ಮತ್ತು ಪ್ರಾಣಿಗಳ ಮೇಲೆ ರೇಬೀಸ್ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ರೇಬೀಸ್ ದಿನದ ಉದ್ದೇಶ. ವಿಶ್ವ ರೇಬಿಸ್ ದಿನವಾದ ಇಂದು ರೇಬಿಸ್ ರೋಗ ಹರಡುವಿಕೆ ಹಾಗೂ ತಡೆಗಟ್ಟುವುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸೋಣ. 2030ರ ವೇಳೆಗೆ ರೇಬಿಸ್ ಮುಕ್ತ ಕರ್ನಾಟಕವನ್ನಾಗಿ ಮಾಡೋಣ.
ಯಾವುದೇ ಪ್ರಾಣಿ ಪರಚಿದ, ಕಡಿತದ ಪ್ರಕರಣಗಳಿಗೆ ತಕ್ಷಣವೇ ನಿಮ್ಮ ಹತ್ತಿರದ ಪ್ರಾಥಮಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ರೇಬಿಸ್ ತಡೆಗಟ್ಟುವ ಲಸಿಕೆ ಮತ್ತು ರೇಬಿಸ್ ಇಮ್ಯುನೊಗ್ಲೋಬ್ಯುಲಿನ್ ಉಚಿತವಾಗಿ ಲಭ್ಯವಿದೆ.
ರೇಬೀಸ್ ವೈರಸ್ ಹೇಗೆ ಹರಡುತ್ತದೆ ?
ನಾಯಿಗಳು ಮತ್ತು ಅನೇಕ ಪ್ರಾಣಿಗಳ ಲಾಲಾರಸ ಗ್ರಂಥಿಗಳಲ್ಲಿ ರೇಬೀಸ್ ವೈರಸ್ ಇರುತ್ತದೆ. ನಾಯಿಗಳು ಮನುಷ್ಯನನ್ನು ಕಚ್ಚಿದಾಗ ಈ ವೈರಸ್ ರಕ್ತದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ನಂತರ ಮೆದುಳನ್ನು ತಲುಪುತ್ತದೆ ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ವ್ಯಕ್ತಿಯ ಲಾಲಾರಸ ಗ್ರಂಥಿಗಳಲ್ಲಿ ಹರಡುತ್ತದೆ ಮತ್ತು ಬಾಯಿಯಲ್ಲಿ ನೊರೆಯನ್ನು ಉತ್ಪಾದಿಸುತ್ತದೆ. ಈ ವೈರಸ್ 10 ದಿನಗಳಿಂದ 8 ತಿಂಗಳ ನಡುವೆ ಯಾವಾಗ ಬೇಕಾದರೂ ತನ್ನ ಪರಿಣಾಮವನ್ನು ತೋರಿಸಬಹುದು.
ಮುನ್ನೆಚ್ಚರಿಕೆ ಕ್ರಮ , ಚಿಕಿತ್ಸೆ ಏನು ?
ರೇಬೀಸ್ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ತಪ್ಪಿಸಬಹುದು. ನಾಯಿ ಕಚ್ಚಿದ ನಂತರ ತಕ್ಷಣ ಗಾಯವನ್ನು ಸ್ವಚ್ಛಗೊಳಿಸಬೇಕು. ಅದು ದೇಹದ ಉಳಿದ ಭಾಗಗಳಿಗೆ ಹರಡುವುದಿಲ್ಲ. ಇದಲ್ಲದೆ 24 ಗಂಟೆಗಳ ಒಳಗೆ ಎಂಟಿ-ರೇಬೀಸ್ ಸೀರಮ್ ಅನ್ನು ಪಡೆಯಬೇಕು. ಈ ಚುಚ್ಚುಮದ್ದು ಪ್ರತಿಜನಕದ ವಿರುದ್ಧ ಪೂರ್ವ ಸಿದ್ಧಪಡಿಸಿದ ಪ್ರತಿಕಾಯಗಳನ್ನು ನೀಡುತ್ತದೆ. ಸೀರಮ್ ನೀಡಲು ವಿಳಂಬವಾದರೆ ಜೀವ ಉಳಿಸುವುದು ಕಷ್ಟ. ಇದಲ್ಲದೇ ಸಾಕು ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡುವುದು ಸಹ ಅಗತ್ಯವಾಗಿದೆ.