ಈ ವರ್ಷದ ನವೆಂಬರ್ 15ರ ವೇಳೆಗೆ ವಿಶ್ವದ ಜನಸಂಖ್ಯೆ 800 ಕೋಟಿ ತಲುಪಲಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಅಲ್ಲದೆ 2023 ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ, ಚೀನಾವನ್ನು ಹಿಂದಿಕ್ಕಲಿದೆ ಎಂದು ಈ ವರದಿ ಹೇಳಿದೆ.
ಸೋಮವಾರದಂದು ಈ ಕುರಿತ ವರದಿ ಬಿಡುಗಡೆ ಮಾಡಲಾಗಿದ್ದು, ವಿಶ್ವವನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕಿದೆ. ವೈವಿಧ್ಯತೆಯಿಂದ ಕೂಡಿರುವ ಈ ವಿಶ್ವದ ರಕ್ಷಣೆಯ ಹೊಣೆ ಎಲ್ಲರದ್ದೂ ಆಗಿದೆ ಎಂದು ಹೇಳಲಾಗಿದೆ.
ಈ ವರದಿಯಲ್ಲಿ ಕೆಲವೊಂದು ಆಸಕ್ತಿಕರ ಅಂಶಗಳು ಸಹ ಬಹಿರಂಗವಾಗಿದ್ದು, 2030 ರಲ್ಲಿ ವಿಶ್ವದ ಜನಸಂಖ್ಯೆ 8.5 ಬಿಲಿಯನ್ ಇರಲಿದ್ದು, 2050ಕ್ಕೆ 9.7 ಬಿಲಿಯನ್ ಹಾಗೂ 2080 ಕ್ಕೆ 10.4 ಬಿಲಿಯನ್ ತಲುಪಲಿದೆ ಎಂದು ತಿಳಿಸಿದೆ.
ಮುಂದುವರೆದ ರಾಷ್ಟ್ರಗಳಲ್ಲಿ ಜನನ ಪ್ರಮಾಣ ಇಳಿಮುಖವಾಗಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್ ಮತ್ತು ಟಾಂಜೆನಿಯಾದಲ್ಲಿ ಜನಸಂಖ್ಯೆ ಏರುಮುಖವಾಗಿದೆ ಎಂದು ವರದಿ ತಿಳಿಸಿದೆ.