ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದಕ್ಕೂ ಎರಡು ದಿನ ಮುನ್ನ ಅಂದರೆ ಮಂಗಳವಾರದಂದು ಮಧ್ಯಪ್ರದೇಶದ ಬೈಗಾ ಬುಡಕಟ್ಟಿಗೆ ಸೇರಿದ ಮಹಿಳೆಯೊಬ್ಬರು ತಮ್ಮ 43ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ್ದಾರೆ.
ಜುಕ್ತಿಬಾಯಿ ಎಂಬ ಈ ಮಹಿಳೆ ಮಂಗಳವಾರ ಬಾಲಘಾಟ್ ಜಿಲ್ಲಾಸ್ಪತ್ರೆಯಲ್ಲಿ ತಮ್ಮ ಹತ್ತನೇ ಮಗುವಿಗೆ ಜನ್ಮ ನೀಡಿದ್ದು, ಗಮನಾರ್ಹ ಸಂಗತಿ ಎಂದರೆ ಆಕೆಯ ಮೊದಲ ಮಗಳಿಗೆ ಈಗ 22 ವರ್ಷ ಪ್ರಾಯ. ಜುಕ್ತಿಬಾಯಿ 13ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ತಾಯಿಯಾಗಿದ್ದರು.
ಜುಕ್ತಿಬಾಯಿ ತಮ್ಮ ಪತಿ ಅಕ್ಲುಸಿಂಗ್ ಮತ್ತು ಕುಟುಂಬದೊಂದಿಗೆ ಮಹಾಗಾಂವ್ನಲ್ಲಿ ವಾಸಿಸುತ್ತಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಮೊದಲಿಗೆ ಬಿರ್ಸಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರ ತೆಗೆಯಲಾಗಿದೆ. ಈಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಸಂತಾನ ನಿಯಂತ್ರಣ ಯೋಜನೆ ಜಾರಿಯಲ್ಲಿದ್ದರೂ ಸಹ ಬೈಗಾ ಬುಡಕಟ್ಟಿನ ಜನಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇವರುಗಳಿಗೆ ವಿನಾಯಿತಿ ನೀಡಿದೆ. ಹೀಗಾಗಿ ಜುಕ್ತಿಬಾಯಿ ಹಾಗೂ ಆಕೆಯ ಪತಿ, ಸಂತಾನ ನಿಯಂತ್ರಣಕ್ಕೆ ಮುಂದಾಗಿರಲಿಲ್ಲ. ಜುಕ್ತಿಬಾಯಿ ಮೊದಲ ಮಗಳಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೂ ಮಕ್ಕಳಿದ್ದಾರೆ.