ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ತಾಣಗಳು ಸೇರ್ಪಡೆಗೊಂಡಿದೆ. ಗುಜರಾತ್‌ನ ಎರಡು ಪಾರಂಪರಿಕ ತಾಣಗಳು – ಮೊಧೇರಾದಲ್ಲಿನ ಸೂರ್ಯ ದೇವಾಲಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ವಡ್ನಗರ – ಮೆಹಸಾನಾ ಜಿಲ್ಲೆಯಲ್ಲಿವೆ.
ಈ ಪಟ್ಟಿಗೆ ಸೇರಿಸಲಾದ ಮೂರನೇ ತಾಣವೆಂದರೆ ತ್ರಿಪುರಾದ ಉನಕೋಟಿಯ ಶಿಲಾಕೃತಿಯ ಉಬ್ಬು ಶಿಲ್ಪಗಳು.
ಈ ವಿಚಾರವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ “ಭಾರತಕ್ಕೆ ಅಭಿನಂದನೆಗಳು!” ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಸಹ ಅವರ ಟ್ವೀಟ್ ಅನ್ನು ಹಂಚಿಕೊಂಡಿದೆ. ಇದರೊಂದಿಗೆ ಭಾರತದ ಒಟ್ಟು 52 ತಾಣಗಳು ಯುನೆಸ್ಕೋದ ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರಿದಂತಾಗುತ್ತದೆ ಮತ್ತು ಈ ಹೆಜ್ಜೆ ಭಾರತದ ಸಾಂಸ್ಕೃತಿಕ ಪರಂಪರೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂದು ಒತ್ತಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಕಾರ ‘ಪಾರಂಪರಿಕ ತಾಣಗಳ ಸಂಭಾವ್ಯ ಪಟ್ಟಿ’ಯು, ವಿಶ್ವಾದ್ಯಂತದ ದೇಶಗಳು ‘ವಿಶ್ವಸಂಸ್ಥೆಯ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರಿಸಲು ಅರ್ಹವೆನ್ನಿಸುವ ತಮ್ಮ-ತಮ್ಮ ದೇಶದಲ್ಲಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳನ್ನು ವಿಶ್ವಸಂಸ್ಥೆಗೆ ಶಿಫಾರಸ್ಸು ಮಾಡುವ ಪಟ್ಟಿಯಾಗಿದೆ.
ಮೊಧೇರಾದಲ್ಲಿರುವ ಸೂರ್ಯ ದೇವಾಲಯವು ಮೆಹ್ಸಾನಾ ಜಿಲ್ಲೆಯ ಬೇಚಾರಾಜಿ ತಾಲೂಕಿನ ರೂಪನ್ ನದಿಯ ಉಪನದಿಯಾದ ಪುಷ್ಪಾವತಿ ನದಿಯ ಎಡದಂಡೆಯಲ್ಲಿದೆ. ಇದನ್ನು ಮಾರು-ಗುರ್ಜರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಹೃದಯ ಭಾಗ (ಗರ್ಭಗೃಹ), ಸಭಾಂಗಣ (ಗಧಾಮಂಡಪ), ಹೊರ ಸಭಾಂಗಣ ಅಥವಾ ಸಭಾಭವನ (ಸಭಾಮಂಟಪ ಅಥವಾ ರಂಗಮಂಟಪ) ಮತ್ತು ಪವಿತ್ರ ಕೊಳ (ಕುಂಡ) ಒಳಗೊಂಡಿದೆ. ಇದನ್ನು ಈಗ ರಾಮಕುಂಡ ಎಂದು ಕರೆಯಲಾಗುತ್ತದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವನ್ನು ಪ್ರಕಾಶಮಾನವಾದ ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ.
ವಡ್ನಾಗರ ಒಂದು ಐತಿಹಾಸಿಕ ಪಟ್ಟಣವಾಗಿದ್ದು, ಇದು 2,700 ವರ್ಷಗಳಿಗೂ ಹೆಚ್ಚು ಹಳೆಯದೆಂದು ಪ್ರತಿಪಾದಿಸಲಾಗಿದೆ. ಈ ಪಟ್ಟಣ ಒಳನಾಡಿನ ಬಂದರು, ಚಿಪ್ಪುಗಳು ಮತ್ತು ಮಣಿಗಳ ಕೈಗಾರಿಕೆಗಳ ಕೇಂದ್ರಗಳನ್ನು ಹೊಂದಿತ್ತು, ಪ್ರಮುಖ ವಾಣಿಜ್ಯ ಪಟ್ಟಣವಾಗಿತ್ತಲ್ಲದೆ ಧಾರ್ಮಿಕ ಕೇಂದ್ರವಾಗಿಯೂ ಗುರುತಿಸಿಕೊಂಡಿತ್ತು.