ಜಾಗತಿಕ ಮಟ್ಟದಲ್ಲಿ ಸರಿ ಸುಮಾರು 1.3 ಬಿಲಿಯನ್ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಸೈಲೆಂಟ್ ಕಿಲ್ಲರ್ ಕಾಯಿಲೆಯು ಮನುಷ್ಯನಲ್ಲಿ ಹೃದಯ ಸಂಬಂಧಿ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಯನ್ನು ಹೆಚ್ಚು ಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಅಧಿಕ ರಕ್ತದೊತ್ತಡವನ್ನು ತುಂಬಾ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹಾಗೂ ಇದಕ್ಕೆ ಕಡಿಮೆ ದರ ಔಷಧಿ ಕೂಡ ಸಾಕಾಗುತ್ತದೆ. ಆದರೆ ಅರ್ಧದಷ್ಟು ಜನತೆಗೆ ತಮಗೆ ರಕ್ತದೊತ್ತಡದ ಸಮಸ್ಯೆ ಇದೆ ಎಂಬುದೇ ಅರಿವಿಗೆ ಬಂದಿರೋದಿಲ್ಲ. ಇಂತಹ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ವರದಿ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಲಂಡನ್ನ ಇಂಪಿರಿಯಲ್ ಕಾಲೇಜಿನ ಸಹಭಾಗಿತ್ವದಲ್ಲಿ ಈ ಅಧ್ಯಯನವನ್ನು ನಡೆಸಲಾಗಿತ್ತು. ಕಳೆದ 30 ವರ್ಷಗಳಲ್ಲಿ ಅಧಿಕರಕ್ತದೊತ್ತಡದ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ರಕ್ತದೊತ್ತಡ ಪೀಡಿತರ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲಾಗಿದೆ ಆದರೆ ಕಡಿಮೆ ಆದಾಯ ಹೊಂದಿರುವ ದೇಶಗಳಲ್ಲಿ ಈ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.
ಆಫ್ರಿಕಾದ ಹಲವು ಭಾಗಗಳು, ದಕ್ಷಿಣ ಏಷಿಯಾದ ಕೆಲ ಭಾಗಗಳು, ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಲಂಡನ್ ಕಾಲೇಜಿನ ಪ್ರಾಧ್ಯಾಪಕ ಮಜೀದ್ ಇಜ್ಜತಿ ಹೇಳಿದ್ದಾರೆ.
2019ರಲ್ಲಿ ಸರಿಸುಮಾರು 17.9 ಮಿಲಿಯನ್ ಮಂದಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ರಕ್ತದೊತ್ತಡವೇ ಮೂಲ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದರ ಚಿಕಿತ್ಸೆಗೆ ಕಡಿಮೆ ಹಣ ಸಾಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಔಷಧಿಗಳು ಕೂಡ ಅಗ್ಗದ ದರದಲ್ಲಿದೆ. ಆದರೂ ಕೂಡ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಯೂನಿವರ್ಸಲ್ ಹೆಲ್ತ್ ಕವರೇಜ್ನಡಿಯಲ್ಲಿ ಸೇರಿಸುವ ಅವಶ್ಯಕತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕವಲ್ಲದ ವಿಭಾಗದ ನಿರ್ದೇಶಕ ಬೆಂಟೆ ಮಿಕೆಲ್ಸನ್ ಹೇಳಿದ್ದಾರೆ.