2008ರ ಬಳಿಕ ವಿಶ್ವದ ಆರ್ಥಿಕತೆ ಮತ್ತೊಮ್ಮೆ ಮಹಾ ಕುಸಿತ ಕಾಣಲಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ವಿವಿಧ ರಾಷ್ಟ್ರಗಳ ಷೇರುಪೇಟೆ ಹಾಗೂ ಕರೆನ್ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಲ್ಲೋಲಕಲ್ಲೋಲವಾಗುತ್ತಿದೆ. ಹೂಡಿಕೆದಾರರು ಮುಂದೇನು ಎಂಬ ಆತಂಕದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶ್ವ ವಾಣಿಜ್ಯ ಸಂಸ್ಥೆಯ ಮುಖ್ಯಸ್ಥೆ Ngozi Okonjo Iweala ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಗ್ಲೋಬಲ್ ರಿಸಿಶನ್ ಅತ್ಯಂತ ಸನಿಹದಲ್ಲಿದೆ ಎಂದು ಹೇಳಿದ್ದಾರೆ. ಜಿನೇವಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸಾಂಕ್ರಾಮಿಕ, ರಷ್ಯಾ – ಉಕ್ರೇನ್ ಯುದ್ಧ, ತಾಪಮಾನ ಬದಲಾವಣೆ, ಆಹಾರ ಪದಾರ್ಥಗಳ ಬೆಲೆ ಏರಿಕೆ ಮೊದಲಾದವುಗಳು ಇದಕ್ಕೆ ಕಾರಣವಾಗಿದೆ. ಆರ್ಥಿಕತೆ ಹಿಂಜರಿತ ಪರ್ವ ಎದುರಿಸಲು ಎಲ್ಲ ರಾಷ್ಟ್ರಗಳು ಸನ್ನದ್ಧರಾಗಬೇಕಿದೆ ಎಂದಿದ್ದಾರೆ.
ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದ್ದು, ಬ್ರಿಟನ್ ಕರೆನ್ಸಿ ಪೌಂಡ್, ಜಪಾನ್ ಕರೆನ್ಸಿ ಯೆನ್, ಯುರೋಪ್ ನ ಯುರೋ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇದರ ಪರಿಣಾಮ ಅಗತ್ಯ ವಸ್ತುಗಳ ಅಮದಿನ ಮೇಲೆ ಆಗುತ್ತಿದ್ದು, ದೈನಂದಿನ ಜೀವನ ದುಬಾರಿಯಾಗತೊಡಗಿದೆ. 2008ರ ಆರ್ಥಿಕ ಹಿಂಜರಿತದ ಬಗ್ಗೆ ಮುನ್ಸೂಚನೆ ನೀಡಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿ ಕೂಡ 2022ರ ಅಂತ್ಯಕ್ಕೆ ವಿಶ್ವ ಮತ್ತೊಮ್ಮೆ ಆರ್ಥಿಕ ಹಿಂಜರಿತ ಅನುಭವಿಸಲಿದೆ ಎಂದು ಭವಿಷ್ಯ ನುಡಿದಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.