ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದಲ್ಲಿ ಕೃತಕ ಬುದ್ದಮತ್ತೆಗಾಗಿ ವಿಶ್ವದರ್ಜೆಯ ಕೇಂದ್ರವನ್ನು ಸ್ಥಾಪಿಸಲು ಎಕಾನಾಮಿಕ್ ಫೋರಂನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜೆರೆಮಿ ಜುರ್ಗೆನ್ಸ್ ಅವರೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ.
ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ಇದು ಭಾರತದಲ್ಲೇ AI ಗೆ ಮೀಸಲಾದ ಫೋರಂನ ಏಕೈಕ ಕೇಂದ್ರವಾಗಿರುವುದು ಹಾಗೂ WEF ನ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರ (C4IR) ನೆಟ್ ವರ್ಕ್ ಭಾಗವಾಗಿರುವುದು ಹೆಗ್ಗಳಿಕೆ ವಿಚಾರವಾಗಿದೆ. ಇನ್ನು ಈ ಕೇಂದ್ರವು ಉದ್ಯಮವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶೈಕ್ಷಣಿಕ ಜಾಲಗಳು, ತಾಂತ್ರಿಕ ಪ್ರವೃತ್ತಿಗಳ ವಿನಿಮಯವನ್ನು ಸುಗಮಗೊಳಿಸುತ್ತದೆ, ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಜಾಗತಿಕ ಸಮಸ್ಯೆಗಳಿಗೆ ಸಕ್ರಿಯವಾಗಿ ಪ್ರತಿಕ್ರಿಯಿಸುತ್ತದೆ ಎಂದಿದ್ದಾರೆ.
AI ಕೇಂದ್ರದ ಪ್ರಾಥಮಿಕ ಗುರಿ ಕರ್ನಾಟಕವನ್ನು ಕೃತಕ ಬುದ್ಧಿಮತ್ತೆಯ ಪ್ರಮುಖ ಜಾಗತಿಕ ಕೇಂದ್ರವಾಗಿ ಇರಿಸುವುದಾಗಿದೆ. ಪ್ರಪಂಚದಾದ್ಯಂತದ ಇತರ ಪ್ರಾದೇಶಿಕ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ, ಕರ್ನಾಟಕ ಕೇಂದ್ರವು AI ಯ ನೈತಿಕ ಮತ್ತು ಪ್ರಾಯೋಗಿಕ ಆಯಾಮಗಳ ಕುರಿತು ಜಾಗತಿಕ ಸಂವಾದಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.