ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
ಸೈಕ್ಲಿಂಗ್ ಶೂನ್ಯ ಮಾಲಿನ್ಯ ಸಾರಿಗೆ ವಿಧಾನವಾಗಿದೆ. ಇದು ಪರಿಸರಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ಹೆಚ್ಚೆಚ್ಚು ಜನರಿಗೆ ಸೈಕ್ಲಿಂಗ್ ಬಳಸುವಂತೆ ಪ್ರೋತ್ಸಾಹಿಸಲು ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಜೂನ್ 3 ಅನ್ನು ವಿಶ್ವ ಬೈಸಿಕಲ್ ದಿನವೆಂದು ಘೋಷಿಸಿತು.
ವಿಶ್ವ ಬೈಸಿಕಲ್ ದಿನಾಚರಣೆಯ ಯುಎನ್ ನಿರ್ಣಯವನ್ನು ಉತ್ತೇಜಿಸುವ ಅಭಿಯಾನವನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಲೆಸ್ಜೆಕ್ ಸಿಬ್ಲಿಸ್ಕ್ ನೇತೃತ್ವ ವಹಿಸಿದ್ದರು. ಈ ಅಭಿಯಾನವನ್ನು ಅಂತಿಮವಾಗಿ 56 ದೇಶಗಳು ಬೆಂಬಲಿಸಿದವು. ವಿಶ್ವ ಬೈಸಿಕಲ್ ದಿನವು ಲೋಗೊವನ್ನು ಹೊಂದಿದೆ. ನೀಲಿ ಮತ್ತು ಬಿಳಿ ಬಣ್ಣದ ಲೋಗೊವನ್ನು ಐಸಾಕ್ ಫೆಲ್ಡ್ ವಿನ್ಯಾಸಗೊಳಿಸಿದ್ದಾರೆ. ಲೋಗೋದಲ್ಲಿ ಜೂನ್ 3 ವರ್ಲ್ಡ್ ಬೈಸಿಕಲ್ ಡೇ ಎಂಬ ಹ್ಯಾಶ್ಟ್ಯಾಗ್ ಇದೆ.
ಟೈಪ್ -1,ಟೈಪ್-2 ಡಯಾಬಿಟಿಸ್ ವಿರುದ್ಧದ ಅಭಿಯಾನದಲ್ಲಿ ಉತ್ತಮ, ಆರೋಗ್ಯಕರ ಜೀವನ ಶೈಲಿಯನ್ನು ಪ್ರೋತ್ಸಾಹಿಸಲು ವಿಶ್ವ ಬೈಸಿಕಲ್ ದಿನ ಮಹತ್ವದ ಪಾತ್ರವಹಿಸುತ್ತಿದೆ. ಅತಿ ಹೆಚ್ಚು ಆರೋಗ್ಯ ಕಾಪಾಡಿಕೊಳ್ಳಲು ಸೈಕ್ಲಿಂಗ್ ಮಾರ್ಗವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸೈಕಲನ್ನು ಮಾನವ ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಹಿಷ್ಣುತೆ, ಪರಸ್ಪರ ತಿಳುವಳಿಕೆ, ಗೌರವ, ಶಾಂತಿಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.
ಬಡ ನಗರ ಪ್ರದೇಶದ ಜನರು, ಖಾಸಗಿ ವಾಹನ ಪಡೆಯಲು ಸಾಧ್ಯವಾಗದ ಜನರಿಗೆ ಸೈಕಲ್ ಪ್ರಯೋಜನಕಾರಿ. ಹೃದಯ ಖಾಯಿಲೆ, ಕ್ಯಾನ್ಸರ್, ಮಧುಮೇಹ, ಪಾರ್ಶ್ಚವಾಯು, ಸಾವಿನ ಅಪಾಯವನ್ನು ತಪ್ಪಿಸುತ್ತದೆ. ಇದು ಉತ್ತಮ ಸಕ್ರಿಯ ಸಾರಿಗೆ ಮಾತ್ರವಲ್ಲ ಆರೋಗ್ಯಕರ, ನ್ಯಾಯಸಮ್ಮತ ಮತ್ತು ವೆಚ್ಚವಿಲ್ಲದ ಸಾರಿಗೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.